Home Mangalorean News Kannada News ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಲು ಸಿದ್ದರಾದರೇ ಅಣ್ಣಾಮಲೈ? 

ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಲು ಸಿದ್ದರಾದರೇ ಅಣ್ಣಾಮಲೈ? 

Spread the love

ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಲು ಸಿದ್ದರಾದರೇ ಅಣ್ಣಾಮಲೈ? 

ತಮಿಳುನಾಡು: ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ, ಕೆ.ಅಣ್ಣಾಮಲೈ ಹೊಸ ಪಕ್ಷ ಕಟ್ಟುತ್ತಾರೆಂಬ ಊಹಾಪೋಹದ ಜತೆಗೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷವನ್ನು ತೊರೆಯಲಿದ್ದಾರೆಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ, ಮಂಗಳವಾರ ನವದೆಹಲಿಯಲ್ಲಿ ಪಕ್ಷದ ಅಧ್ಯಕ್ಷರಾದ ನಿತೀನ್ ನಬೀನ್ ಹಾಗೂ ಇತರ ಹಿರಿಯ ಮುಖಂಡರನ್ನು ಭೇಟಿಯಾಗಿ ಅಣ್ಣಾಮಲೈ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಸದ್ಯದ ಬೆಳವಣಿಗೆಯಲ್ಲಿ ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಮುಂದೇನು ಎಂಬ ಬಗ್ಗೆ ತಮ್ಮ ಬೆಂಬಲಿಗರ ಜತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ನಾಲ್ಕು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಇತ್ತೀಚೆಗೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷ ಜಯಭೇರಿ ಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಇದರ ಪರಿಣಾಮ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮನ್ನಣೆ ಇಲ್ಲ ಎಂಬುದು ಸಾಬೀತಾಗಿದೆ. ಈ ಎಲ್ಲಾ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಅಣ್ಣಾಮಲೈ ಬಿಜೆಪಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆನ್ನಲಾಗುತ್ತಿದೆ.

ಎಐಎಡಿಎಂಕೆ ಜತೆಗಿನ ಮೈತ್ರಿಗೆ ಅನುಕೂಲವಾಗುವಂತೆ ಅಣ್ಣಾಮಲೈ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದ ನಂತರ ಯಾವ ಅಸಮಾಧಾನವನ್ನು ಬಹಿರಂಗಪಡಿಸದೇ ಕಾರ್ಯಪ್ರವೃತ್ತರಾಗಿದ್ದರು. ಅಲ್ಲದೇ ಎಐಎಡಿಎಂಕೆ ಎಡಪ್ಪಾಡಿ ಪಳನಿಸ್ವಾಮಿ ಜತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲದಿರುವುದು ಅಣ್ಣಾಮಲೈಗೆ ತಿರುಗುಬಾಣವಾಗಲು ಕಾರಣವಾಗಿತ್ತು. ಅದಕ್ಕೆ ಉದಾಹರಣೆ ಎಂಬಂತೆ 2026ರ ವಿಧಾನಸಭೆ ಚುನಾವಣೆ ವೇಳೆ ಎಐಎಡಿಎಂಕೆ ಎನ್ ಡಿಎ ಮೈತ್ರಿ ಮಾತುಕತೆಯಾದಾಗ ಅಣ್ಣಾಮಲೈಗೆ ಟಿಕೆಟ್ ನೀಡಬಾರದು ಎಂಬ ಷರತ್ತು ವಿಧಿಸಲಾಗಿತ್ತಂತೆ!

ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ ಜನಪ್ರಿಯತೆ ಗಳಿಸಲು ಸಾಧ್ಯ ಎಂಬುದನ್ನು ಅಣ್ಣಾಮಲೈ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.

ಸಿಂಗಾನಲ್ಲೂರ್ ಕ್ಷೇತ್ರದ ಟಿಕೆಟ್ ನಿರಾಕರಣೆ ನಂತರವೂ ಕೂಡಾ ಅಣ್ಣಾಮಲೈ, ತಾವೇ ಟಿಕೆಟ್ ನಿರಾಕಸಿರುವುದಾಗಿ ಸಮಜಾಯಿಷಿ ನೀಡಿದ್ದರು ಕೂಡಾ ಅಣ್ಣಾಮಲೈ ಆಪ್ತರಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ಆದರೆ ಚುನಾವಣ ಪ್ರಚಾರದ ವೇಳೆಯೂ ಅಣ್ಣಾಮಲೈ ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವುದು ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳತೊಡಗಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಬಗ್ಗೆ ಅಣ್ಣಾಮಲೈ ತಮ್ಮ ಎಕ್ಸ್ ಖಾತೆಯಲ್ಲಿ ಬಹಿರಂಗವಾಗಿ ಟೀಕಿಸಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದು ಬಿಜೆಪಿ ಮುಖಂಡರ ಹುಬ್ಬೇರಿಸುವಂತೆ ಮಾಡಿತ್ತು. ತಮಿಳುನಾಡಿನಲ್ಲಿ ಭಾಷೆ ವಿಚಾರದಲ್ಲಿ ಸೂಕ್ಷ್ಮವಾಗಿದ್ದು,ಅಣ್ಣಾಮಲೈ ಪ್ರಧಾನಿ ಮೋದಿ ಸರ್ಕಾರದ ತ್ರಿಭಾಷಾ ಸೂತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಕೆಂಗಣ್ಣಿಗೆ ಗುರಿಯಾಗಿಸಿತ್ತು ಎನ್ನಲಾಗಿದೆ.

ಇಷ್ಟೆಲ್ಲಾ ಚರ್ಚೆ, ಬೆಳವಣಿಗೆಯ ನಡುವೆಯೂ ಅಣ್ಣಾಮಲೈ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಲಾಗುತ್ತಿದ್ದರೂ ಕೂಡಾ ಅವರಿಗೆ ಬಿಜೆಪಿ ಹೈಕಮಾಂಡ್ ಉನ್ನತ ಸ್ಥಾನಮಾನ ನೀಡುತ್ತದೆ ಎಂದು ಕೆಲವರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಣ್ಣಾಮಲೈ ಹೊಸ ಪಕ್ಷ ಕಟ್ಟುತ್ತಾರಾ ಅಥವಾ ಮುಂದಿನ ಹೆಜ್ಜೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ.


Spread the love

Exit mobile version