2012ರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: 2012ರಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
2009ರ ಮೇ ತಿಂಗಳಲ್ಲಿ ವಾಹನ ಖರೀದಿಸಲು ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ ₹10 ಲಕ್ಷ ಸಾಲ ಪಡೆದು ಟೆಲ್ಕಾನ್ EX-70 ಮೆಶಿನ್ ವಾಹನ ಖರೀದಿಸಿದ್ದ ಆರೋಪಿಯಾಗಿರುವ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ನಿವಾಸಿ ಶ್ರೀನಿವಾಸ ಬಿ.ಆರ್. (48) ಅವರು, ಸಾಲದ ಕಂತುಗಳನ್ನು ಮರುಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು. ಅಲ್ಲದೆ, ವಾಹನವನ್ನು ಪರಿಶೀಲನೆಗೆ ಹಾಜರುಪಡಿಸುವಂತೆ ಸಂಸ್ಥೆ ಸೂಚಿಸಿದರೂ ವಾಹನವನ್ನು ಹಾಜರುಪಡಿಸದೆ ಸಂಸ್ಥೆಗೆ ವಂಚನೆ ಎಸಗಿರುವ ಆರೋಪ ಕೇಳಿಬಂದಿತ್ತು.
ಈ ಕುರಿತು ಶ್ರೀರಾಮ್ ಫೈನಾನ್ಸ್ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 59/2012ರಂತೆ ಐಪಿಸಿ ಕಲಂ 406, 420, 421 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಬಿ.ಆರ್. ವಿರುದ್ಧ ಮಾನ್ಯ ನ್ಯಾಯಾಲಯವು ಸಿಸಿ ನಂ. 526/2025ರಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ವಾರಂಟ್ ಜಾರಿಯಾದ ಬಳಿಕವೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅವರನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡವು ಸೆ. 2ರಂದು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್‌ನಲ್ಲಿ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಆರೋಪಿಯ ವಿರುದ್ಧ ಇನ್ನೂ ಒಂದು ವಾರಂಟ್ ಬಾಕಿ ಇದ್ದು, ಮಂಗಳೂರು ಜೆಎಂಎಫ್‌ಸಿ 5ನೇ ನ್ಯಾಯಾಲಯದ ಸಿಸಿ ನಂ. 1453/2024ರ ಚೆಕ್ ಬೌನ್ಸ್ ಪ್ರಕರಣವೂ ಸೇರಿದೆ.
