ವಾಹನ ಕಳವು ಆರೋಪಿತನ ಬಂಧನ
ಮಂಗಳೂರು: ಮನೆಯೊಂದರ ಎದುರು ನಿಲ್ಲಿಸಿದ್ದ ಹೊಂಡಾ ಡಿಯೋ ಸ್ಕೂಟರ್ ಕಳವು ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉರ್ವಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕ್ಕಲ್ನಲ್ಲಿ ವಾಸದ ಮನೆಯ ಎದುರು ನಿಲ್ಲಿಸಿದ್ದ KA-19-EB-2226 ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಸ್ಕೂಟರ್ ಕಳವಾಗಿರುವ ಬಗ್ಗೆ ಜುಲೈ 24, 2026ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸುತ್ತಮುತ್ತಲಿನ ಸಿ.ಸಿ. ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಯ ಚಹರೆಯನ್ನು ಗುರುತಿಸಿ, ಬಾತ್ಮೀದಾರರಿಂದ ಮಾಹಿತಿ ಸಂಗ್ರಹಿಸಿದ್ದರು. ತನಿಖೆಯ ಆಧಾರದ ಮೇಲೆ ಸ್ಕೂಟರ್ ಕಳವು ಮಾಡಿದ್ದಾನೆ ಎನ್ನಲಾದ ಮಹಮ್ಮದ್ ಫೈಜಲ್ ಅಲಿಯಾಸ್ ತೋಟ ಫೈಜಲ್ (40), ತಂದೆ ದಿವಂಗತ ಇಬ್ರಾಹಿಂ, ಬೈತುಲ್ ಕೌಸರ್, ನ್ಯೂ ತೋಟ ಹೌಸ್, ಕೋಡಿ, ಉಳ್ಳಾಲ, ಮಂಗಳೂರು ಎಂಬಾತನನ್ನು ಹಾಗೂ ಕಳವಾಗಿದ್ದ ದ್ವಿಚಕ್ರ ವಾಹನವನ್ನು ಆಗಸ್ಟ್ 18, 2026ರಂದು ಪತ್ತೆಹಚ್ಚಲಾಗಿದೆ.
ಆರೋಪಿತನ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಆರೋಪಿತನ ವಿರುದ್ಧ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆ, ಕೊಣಾಜೆ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಪ್ರಸ್ತುತ ದಸ್ತಗಿರಿ ವಾರೆಂಟ್ಗಳು ಇರುವುದಾಗಿ ತಿಳಿದುಬಂದಿದೆ.
ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.
