ಜಾಮೀನು ವೇಳೆ ನಕಲಿ ಆಧಾರ್ ಕಾರ್ಡ್ ಬಳಸಿ ನ್ಯಾಯಾಲಯಕ್ಕೆ ವಂಚನೆ ಯತ್ನ : ಇಬ್ಬರ ಬಂಧನ
ಉಡುಪಿ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಮತ್ತೊಬ್ಬ ವ್ಯಕ್ತಿಯ ಹೆಸರಿನಲ್ಲಿ ನ್ಯಾಯಾಲಯಕ್ಕೆ ಜಾಮೀನುದಾರನಾಗಿ ಹಾಜರಾಗಿ ವಂಚನೆಗೆ ಯತ್ನಿಸಿದ ಆರೋಪದಡಿ ಉಡುಪಿ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಮ್ಮರ್ ಫಾರೂಕ್ (ಬಂಟ್ವಾಳ) ಹಾಗೂ ನಿಶಾಂತ್ ಕುಮಾರ್ (ಮಂಗಳೂರು) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಆಗಸ್ಟ್ 13ರಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ಅವರು ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರಿನ ಪ್ರಕಾರ, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಪ್ರಕರಣವೊಂದರಲ್ಲಿ ನೋಮಾನ್ ಎಂಬ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ, ಫಾರೂಕ್ ಎಂಬಾತನು ಪ್ರಶಾಂತ್ ಎಂಬವರ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು ಕೆ.ಟಿ. ಮೊಹಮ್ಮದ್ ಎಂಬವರ ಹೆಸರು ಹಾಗೂ ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿದ್ದಾನೆ ಎನ್ನಲಾಗಿದೆ.
ನಕಲಿ ಆಧಾರ್ ಕಾರ್ಡ್ ಅನ್ನು ಸಿದ್ಧಪಡಿಸಿ, ತನ್ನ ಸ್ವಂತ ಲಾಭಕ್ಕಾಗಿ ಮತ್ತೊಬ್ಬ ವ್ಯಕ್ತಿಯಂತೆ ನಟಿಸಿ, ನ್ಯಾಯಾಲಯವನ್ನು ವಂಚಿಸುವ ಉದ್ದೇಶದಿಂದ ಅದನ್ನು ಜಾಮೀನು ಪ್ರಕ್ರಿಯೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರಿಂದ ನ್ಯಾಯಾಲಯಕ್ಕೆ ಹಾಗೂ ನೈಜ ದಾಖಲೆಗಳನ್ನು ಹೊಂದಿರುವ ಕೆ.ಟಿ. ಮೊಹಮ್ಮದ್ ಮತ್ತು ಪ್ರಶಾಂತ್ ಅವರಿಗೆ ವಂಚಿಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 110/2026, ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳಡಿ ಹಾಗೂ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿಗಳ ಪತ್ತೆಗಾಗಿ ಮೇಲಾಧಿಕಾರಿಗಳ ಆದೇಶದಂತೆ ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪನಿರೀಕ್ಷಕ (ತನಿಖೆ-2) ರತ್ನಾಕರ ಕೆ. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ತಂಡದಲ್ಲಿ ಎಎಸ್ಐ ಲೋಕೇಶ್, ಹೆಡ್ ಕಾನ್ಸ್ಟೆಬಲ್ ಸಂತೋಷ್, ಹೆಡ್ ಕಾನ್ಸ್ಟೆಬಲ್ ಜಗನ್ನಾಥ್ ನಾಯ್ಕ್, ಪೊಲೀಸ್ ಸಿಬ್ಬಂದಿಗಳಾದ ಆನಂದ್ ಹಾಗೂ ಆನಂದಯ್ಯ, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಮತ್ತು ಹೇಮಂತ್ ಸೇರಿದಂತೆ ಉಡುಪಿ ನಗರ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
