‘ಸಮಾಧಾನ ಮಹೋತ್ಸವ’ ಸ್ಥಳದತ್ತ ತೆರಳಲು ಯತ್ನ: 38 ಹಿಂಜಾವೇ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು
ಉಡುಪಿ: ಉಡುಪಿ: ಸಮಾಧಾನ ಮಹೋತ್ಸವ ಕಾರ್ಯಕ್ರಮದ ವಿರೋಧವಾಗಿ ಅಕ್ರಮ ಕೂಟ ರಚಿಸಿ ಸ್ಥಳದತ್ತ ತೆರಳಲು ಯತ್ನಿಸಿದ ಹಿನ್ನೆಲೆ 38 ಮಂದಿಯನ್ನು ಪೊಲೀಸರು ಬಂಧಿಸಿ ಅವರುಗಳ ವಿರುದ್ದ ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರು ಉಡುಪಿ ನಗರ ಪೊಲೀಸ್ ಠಾಣೆಯ ಹೆಚ್ಚುವರಿ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದು, ಉಡುಪಿ ಜಿಲ್ಲೆಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಫೆಲೋಶಿಪ್ ಆಫ್ ಉಡುಪಿ ಡಿಸ್ಟ್ರಿಕ್ ಚರ್ಚಸ್ ವತಿಯಿಂದ ಮಾರ್ಚ್ 20ರಿಂದ 22ರವರೆಗೆ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮವನ್ನು ನ್ಯಾಯಾಲಯದ ಅನುಮತಿ ಪಡೆದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕ್ರಿಶ್ಚಿಯನ್ ಭಾಷಣಕಾರ ಮೋಹನ್ ಸಿ. ಲಾಜರಸ್ ಅವರನ್ನು ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದ ವಿರುದ್ಧ ಕೆಲವು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಮಾನ್ಯ ಕರ್ನಾಟಕ ಹೈಕೋರ್ಟ್ ಆದೇಶದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಾರ್ಚ್ 20ರಂದು ಸಂಜೆ ಸುಮಾರು 5 ಗಂಟೆಯ ವೇಳೆ, ಹಿಂದು ಜಾಗರಣ ವೇದಿಕೆಯ ಶ್ರೀಕಾಂತ್ ಶೆಟ್ಟಿ ನೇತೃತ್ವದಲ್ಲಿ ಸುಮಾರು 38 ಮಂದಿ ಪ್ರತಿಭಟನಾಕಾರರು ಗೋವಿಂದ ಕಲ್ಯಾಣಮಂಟಪದಿಂದ ಸಮಾಧಾನ ಮಹೋತ್ಸವ ನಡೆಯುತ್ತಿದ್ದ ಸ್ಥಳದತ್ತ ಘೋಷಣೆ ಕೂಗುತ್ತಾ ತೆರಳಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದು, ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ ಇರುವುದಾಗಿ ತಿಳಿಸಿ, ಮುಂದೆ ಸಾಗದಂತೆ ಎಚ್ಚರಿಕೆ ನೀಡಿದರು.
ಆದರೂ ಪ್ರತಿಭಟನಾಕಾರರು ಮುಂದುವರಿಯಲು ಯತ್ನಿಸಿದ ಕಾರಣ, ಪೊಲೀಸರು ಅವರನ್ನು ವಶಕ್ಕೆ ಪಡೆದು ಬಂಧಿಸಿದರು. ಬಂಧಿತರಲ್ಲಿ ಮಹೇಶ್ ಶೆಣೈ (43), ಶ್ರೀಕಾಂತ್ ಶೆಟ್ಟಿ , ಸಂತೋಷ(27), ಉಮೇಶ್ ನಾಯ್ಕ್ (51), ಉಮೇಶ್ (35), ರಮೇಶ್ ಶೆಟ್ಟಿ (43), ರಾಜೇಶ್ ಉಚ್ಚಿಲ (41), ದರ್ಶನ್ (23), ಉದಯಕುಮಾರ್ (44), ಪ್ರಶಾಂತ್ (40), ಗುರುರಾಜ್ (37), ಅಜೀತ್ ಗೋಳಿಕಟ್ಟೆ (39), ರಾಧಕೃಷ್ಣ (55), ರೀತೇಶ್ ಪೂಜಾರಿ (25), ಜಗದೀಶ ಪೂಜಾರಿ (31), ಮಹೇಶ್ ಪೂಜಾರಿ(33), ಸುನೀಲ್ ಪೂಜಾರಿ (26), ಚಿರಾಗ್ ಹೆಚ್.ಎಸ್ (22), ಸುದೀಪ್ ಕಡಿಯಾಳಿ (23), ನಿಖಿಲ್ (28), ಸುಜೀತ್ (28), ಸಾಜನ್ ಎಮ್ ಶೆಟ್ಟಿ (34), ರಾಜೇಶ್ ಪೈಯಾರ್ (43), ಲಕ್ಷ್ಮಣ್ ಕರ್ಕೇರಾ (49) , ಶರತ್ಕುಮಾರ್ ಬೈಲಕೆರೆ (42) , ಶೈಲೇಂದ್ರ ಶೆಟ್ಟಿ (50) ವಿಕೇಶ್ ಎಸ್ (29), ನಿತೇಶ್ (32) ,ಸರೋಜಾ ಶೆಣೈ (52), ತಾರಾ ಎಸ್,ತಾರಾ ಆಚಾರ್ಯ (55), ಸಿಂಚನ್ (21), ಧನುಷ್ ಶೆಟ್ಟಿ (21), ವಿಶೇಕ್ ಶೆಟ್ಟಿ (20), ಸಾತ್ವೀಕ್ (20), ಮನೀಷ್ (21), ಅಶ್ವತ್ ಅಚಾರ್ಯ (37), ದಿನೇಶ್ ಸಾವಂತ (47 ಸೇರಿದಂತೆ ಒಟ್ಟು 38 ಮಂದಿ ಸೇರಿದ್ದಾರೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2026ರಡಿ ಕಲಂ 189(2) BNS ಹಾಗೂ 112 KP Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
