ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ ಹಿನ್ನಲೆ: ಭರತ್ ಕುಮ್ಮೇಲ್ ಸೇರಿದಂತೆ ಎಂಟು ಆರೋಪಿಗಳ ಜಾಮೀನು ಆದೇಶಕ್ಕೆ ತಡೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮೇಲ್ ಸೇರಿದಂತೆ ಎಂಟು ಆರೋಪಿಗಳಿಗೆ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಭರತ್ ಕುಮೇಲ್, ಪ್ರದೀಪ್, ರಂಜಿತ್, ಶಿವಪ್ರಸಾದ್, ಅಭಿನ್ ರೈ, ಸಾಹಿತ್, ಸಚಿನ್ ಮತ್ತು ತೇಜಾಕ್ಷ ಎಂಬ ಎಂಟು ಆರೋಪಿಗಳು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 483ರ ಅಡಿಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಆರೋಪಿಗಳು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಯೇ ಮುಂದುವರಿಯಬೇಕಿದ್ದ ಕಾರಣ ಜಾಮೀನು ಮಂಜೂರಾದರೂ ತಕ್ಷಣ ಜೈಲಿನಿಂದ ಬಿಡುಗಡೆಯಾಗುವಂತಿರಲಿಲ್ಲ. ಈ ನಡುವೆ, ಮೈಸೂರು ನ್ಯಾಯಾಲಯದ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರದ ಪರವಾಗಿ ಅಡ್ವಕೇಟ್ ಜನರಲ್ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
