ಬೈಕಂಪಾಡಿ | ಅನೈರ್ಮಲ್ಯ ಕಾರಣ; ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಬೀಗ
ಸುರತ್ಕಲ್: ಸುರತ್ಕಲ್ ವ್ಯಾಪ್ತಿಯಲ್ಲಿ ದ.ಕ. ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಅನೈರ್ಮಲ್ಯದ ಕಾರಣಕ್ಕಾಗಿ ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಫಾರ್ಚುನ್ ಇಂಡಸ್ಟ್ರೀಸ್ ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಅಧಿಕಾರಿಗಳು ಬೀಗ ಜಡಿದರು.
ಸೋಮವಾರ ಬೆಳಗ್ಗಿನಿಂದ ಕಾರ್ಯಾಚರಣೆ ಆರಂಭಿಸಿದ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ಐದು ತಂಡಗಳು ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿರುವ ಫಾರ್ಚುನ್ ಇಂಡಸ್ಟ್ರೀಸ್ ಚೀಸ್ ಬಾಲ್ ಸ್ನಾಕ್ಸ್ ತಯಾರಿಸುತ್ತಿದ್ದ ಘಟಕಕ್ಕೆ ದಾಳಿ ಮಾಡಿತು. ಈ ವೇಳೆ ಸ್ನಾಕ್ಸ್ ಗಳನ್ನು ಕರಿಯಲು ಹಲವು ಬಾರಿ ಉಪಯೋಗಿಸಿದ್ದ ಕಪ್ಪು ಬಣ್ಣದ ಎಣ್ಣೆಯನ್ನೇ ಉಪಯೋಗಿಸುತ್ತಿದ್ದು ದನ್ನು ಅಧಿಕಾರಿಗಳು ಗಮನಿಸಿದರು. ಜೊತೆಗೆ ತಿಂಡಿ ತಿಳಿಸುಗಳನ್ನು ಕಸದ ಬುಟ್ಟಿಯ ಬಳಿಯೇ ಶೇಖರಿಸಿರುವುದು ಮತ್ತು ಹೆಗ್ಗಣಗಳ ಓಡಾಟವನ್ನು ಅಧಿಕಾರಿಗಳ ತಂಡ ಗಮನಿಸಿತು. ಅಲ್ಲದೆ, ಘಟಕದಲ್ಲಿ ಅನೈರ್ಮಲ್ಯವನ್ನು ಕಂಡುಕೊಂಡ ತಂಡ ಘಟಕಕ್ಕೆ ಬೀಗ ಜಡಿದು ಸೀಸ್ ಮಾಡಿತು.
ಇನ್ನು ಸುರತ್ಕಲ್ನಲ್ಲಿರುವ ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳದಿರು ವುದನ್ನು ಗಮನಿಸಿದ ಅಧಿಕಾರಿಗಳ ತಂಡವು ಆಹಾರ ಮಾದರಿಯ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತು. ಅಲ್ಲದೆ, ಅಪರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮಕೈಗೊಂಡು ನೋಟಿಸ್ ಜಾರಿ ಮಾಡಿತು.
ಸುರತ್ಕಲ್ ನಲ್ಲಿರುವ ಮೋರ್ ರಿಟೇಲ್ ಮಳಿಗೆ, ಬ್ಲಿಂಕ್ ಇಟ್ ಆನ್ಲೈನ್ ಪ್ಲಾಟ್ಫಾರ್ಮ್, ಮೆಕ್ – ಡೊನಾಲ್ಡ್ಸ್ ರೆಸ್ಟೋರೆಂಟ್, ಎನ್ಐಟಿಕೆ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಗಳ ಆಹಾರ ಸರಬರಾಜು ಮಾಡುವ ಅಡುಗೆ ಕೋಣೆಳಿಗೆ ಅನಿರೀಕ್ಷಿತವಾಗಿ ದಾಳಿ ನಡೆಸಿತು. ಸೂರಜ್ ಇಂಟರ್ ನ್ಯಾಷನಲ್ ಹೋಟೆಲ್ ಮತ್ತು ಮಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಿಂದ ಆಹಾರ ಮಾದರಿಯ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿತು.
