ಬೇಕರಿ ಮಾಲೀಕನ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು
ಉಡುಪಿ: ಬೇಕರಿ ಅಂಗಡಿಯಲ್ಲಿ ವ್ಯವಹಾರ ನಡೆಸುತ್ತಿದ್ದ ವೇಳೆ ಪಕ್ಕದ ಅಂಗಡಿ ಮಾಲೀಕನಿಂದ ಹಲ್ಲೆ ಹಾಗೂ ಚೂರಿಯಿಂದ ಇರಿತ ನಡೆದಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುರಳೀಧರ (35), ಕಿದಿಯೂರು ಗ್ರಾಮದ ನಿವಾಸಿಯಾಗಿದ್ದು, ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿಯ ಸಾಗರ್ ಗಂಗಾ ಕಟ್ಟಡದ ನೆಲ ಮಹಡಿಯಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಪೂಜಾ ಬೇಕರಿ ನಡೆಸುತ್ತಿದ್ದಾರೆ.
ಅಂಗಡಿಗೆ ಹೊಂದಿಕೊಂಡಂತೆ ಅಶೋಕ ಎಂಬಾತ ಕಳೆದ ಸುಮಾರು ಒಂದು ವರ್ಷದಿಂದ ಕೃಷ್ಣ ಬೇಕರಿ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಮೇ 236ರಂದು ಮಧ್ಯಾಹ್ನ 12:30ರ ಸುಮಾರಿಗೆ, ಮುರಳೀಧರ ಅವರು ಅಂಗಡಿಯಲ್ಲಿ ವ್ಯವಹಾರ ಮಾಡುತ್ತಿದ್ದ ವೇಳೆ ಅಶೋಕ ಏಕಾಏಕಿ ಅಂಗಡಿಯ ಮುಂಭಾಗಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಅಂಗಡಿಯೊಳಗೆ ನುಗ್ಗಿ ಮುರಳೀಧರ್ ಕಾಲರ್ ಹಿಡಿದು ಕೆನ್ನೆ ಹಾಗೂ ಕುತ್ತಿಗೆ ಭಾಗಕ್ಕೆ ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ನೆಲಕ್ಕೆ ಬೀಳಿಸಿದ್ದಾನೆ ಎಂದು ತಿಳಿಸಲಾಗಿದೆ.
ನಂತರ ಮುರಳೀಧರ್ ಮೇಲಕ್ಕೆ ಎದ್ದ ವೇಳೆ ಆರೋಪಿಯು ತನ್ನ ಬಳಿಯಿದ್ದ ಚೂರಿಯಿಂದ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಚುಚ್ಚಿದ್ದು, ಇದರಿಂದ ಒಳನೋವು ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ನೀಡಲಾದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
