Home Mangalorean News Kannada News ಬಂಟ್ವಾಳ: ವೃದ್ದ ಮಹಿಳೆಯಿಂದ ಚಿನ್ನ ದೋಚಿದ ಆರೋಪಿ ಬಂಧನ

ಬಂಟ್ವಾಳ: ವೃದ್ದ ಮಹಿಳೆಯಿಂದ ಚಿನ್ನ ದೋಚಿದ ಆರೋಪಿ ಬಂಧನ

Spread the love

ಬಂಟ್ವಾಳ: ವೃದ್ದ ಮಹಿಳೆಯಿಂದ ಚಿನ್ನ ದೋಚಿದ ಆರೋಪಿ ಬಂಧನ

ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಕಜೆಕಾರು ಉದ್ದದ ಗುಡ್ಡೆಯಲ್ಲಿ ವೃದ್ಧೆಯೊಬ್ಬರಿಂದ ಬಲವಂತವಾಗಿ ಚಿನ್ನದ ಬಳೆಗಳನ್ನು ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿತನನ್ನು ಬಂಧಿಸಿ, ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆ.14ರಂದು ಸಾದಿಕ್ ಎಂಬವರ ತಾಯಿ ಅವ್ವಮ್ಮ (82) ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮುಖಚಹರೆ ಕಾಣದಂತೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾನೆ. ಬಳಿಕ ಅವ್ವಮ್ಮ ಅವರ ಎರಡೂ ಕೈಗಳಲ್ಲಿದ್ದ ಸುಮಾರು 40 ಗ್ರಾಂ ತೂಕದ, ₹5 ಲಕ್ಷ ಮೌಲ್ಯದ ಎರಡು ಚಿನ್ನದ ಬಳೆಗಳನ್ನು ಬಲವಂತವಾಗಿ ಎಳೆದೊಯ್ದಿದ್ದಾನೆ. ಈ ವೇಳೆ ಅವ್ವಮ್ಮ ಅವರ ಕೈಗೆ ರಕ್ತಗಾಯವಾಗಿತ್ತು.

ಈ ಕುರಿತು ಸಾದಿಕ್ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆ.16ರಂದು ಪ್ರಕರಣದ ಆರೋಪಿತನಾದ, ಅವ್ವಮ್ಮ ಅವರ ಮೊಮ್ಮಗ ಹಾಗೂ ಬಂಟ್ವಾಳ ತೆಂಕಕಜೆಕಾರು ನಿವಾಸಿ ಶಬೀರ್ (33) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಎರಡು ಚಿನ್ನದ ಬಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪತ್ತೆ ಕಾರ್ಯವನ್ನು ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕಿ ರೋಹಿಸಣಿ ಸಿ.ಕೆ. ಅವರ ನೇತೃತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿಪಿಐ ರವಿ ಬಿ.ಎಸ್., ಪುಂಜಾಲಕಟ್ಟೆ ಠಾಣಾ ಪಿಎಸ್ಐ ರಾಜೇಶ್ ಕೆ.ವಿ. ಹಾಗೂ ಸಿಬ್ಬಂದಿ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ನಡೆಸಿದ್ದಾರೆ.


Spread the love

Exit mobile version