ಐದು ದಿನದಲ್ಲೇ ಮನೆ ಕಳ್ಳತನ ಪ್ರಕರಣ ಭೇದಿಸಿದ ಬರ್ಕೆ ಪೊಲೀಸರು; ಮೂವರು ನೇಪಾಳಿ ಮನೆಗಳ್ಳರ ಬಂಧನ
ಮಂಗಳೂರು: ಉರ್ವ ಮಾರ್ಕೆಟ್ ಸಮೀಪದ ಮಠದಕಣಿ ಪ್ರದೇಶದಲ್ಲಿ ನಡೆದ ಲಕ್ಷಾಂತರ ರೂಪಾಯಿ ಮೌಲ್ಯದ ಮನೆ ಕಳ್ಳತನ ಪ್ರಕರಣವನ್ನು ಬರ್ಕೆ ಪೊಲೀಸರು ಕೇವಲ ಐದು ದಿನಗಳಲ್ಲಿ ಭೇದಿಸಿ, ನೇಪಾಳ ಮೂಲದ ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಚಿನ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳು ಸೇರಿದಂತೆ ಸುಮಾರು ₹10 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 11ರಂದು ಸಂಜೆ ಮನೆಯವರು ಮನೆಗೆ ಬೀಗ ಹಾಕಿ ಬಂಟ್ವಾಳ ತಾಲೂಕಿನ ವಿಟ್ಲ ಕಡಂಬುವಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಮನೆಗೆ ಹಿಂದಿರುಗಿದಾಗ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳರು ಸುಮಾರು 64 ಗ್ರಾಂ ಚಿನ್ನಾಭರಣ ಹಾಗೂ ₹25,000 ನಗದು ಸೇರಿದಂತೆ ಒಟ್ಟು ₹8.57 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಪ್ರಕರಣ ದಾಖಲಾದ ಐದು ದಿನಗಳಲ್ಲೇ ಜುಲೈ 17ರ ಬೆಳಗಿನ ಜಾವ ಬೋಳೂರು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಬರ್ಕೆ ಪೊಲೀಸರು ನೇಪಾಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದರು. ತನಿಖೆ ವೇಳೆ ಬರ್ಕೆ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಸಂಪೂರ್ಣ ಚಿನ್ನಾಭರಣಗಳನ್ನು ಹಾಗೂ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 790 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ತಿಲಕ್ ಕುಮಾರ್ ಖಡ್ಕ @ ತಿಲಕ್ ಖಡ್ಕ (36), ಅಶೋಕ್ ರಾಜ್ @ ಅಶೋಕ್ ಸಿಂಗ್ @ ಅಶೋಕ್ ಸಿಂಗ್ ಠಾಕುರಿ (33) ಹಾಗೂ ದಿಪೆಂದರ್ ರಸೈಲಿ (25) ಎಂದು ಗುರುತಿಸಲಾಗಿದೆ. ಮೂವರೂ ನೇಪಾಳ ಮೂಲದವರಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಈ ಹಿಂದೆ 2026ರ ಮಾರ್ಚ್ ತಿಂಗಳಲ್ಲಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಯತ್ನ ಪ್ರಕರಣದಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 15ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ತಮಿಳುನಾಡು, ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿಯೂ ಆರೋಪಿಗಳ ವಿರುದ್ಧ ಪ್ರಕರಣಗಳಿರುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಬರ್ಕೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.