ಸೊರಕೆ ಬಗ್ಗೆ ಟೀಕೆ ಮಾಡುವ ಮೊದಲು ನಿಮ್ಮ ಆಡಳಿತ ಸಾಧನೆಗಳನ್ನು ಜನರ ಮುಂದಿಡಿ: ಮೆಲ್ವಿನ್ ಡಿಸೋಜಾ
ವಿನಯ್ ಕುಮಾರ್ ಸೊರಕೆ ಅವರ ಬಗ್ಗೆ ಟೀಕೆ ಮಾಡುವ ಮೊದಲು, ನಿಮ್ಮ ಆಡಳಿತದ ಸಾಧನೆಗಳನ್ನು ಜನರ ಮುಂದೆ ಇಡಿ. ಕಳೆದ ಎಂಟು ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳಲ್ಲಿ ಎಷ್ಟು ನೇರವೇರಿಸಿದ್ದೀರಿ? ಅಭಿವೃದ್ಧಿ ಸೂಚ್ಯಂಕದಲ್ಲಿ ಎಷ್ಟು ಪ್ರಗತಿ ಸಾಧಿಸಿದ್ದೀರಿ? ವಿನಯ್ ಕುಮಾರ್ ಸೊರಕೆ ಅವರು ಮಾಡಿದ ಕಾರ್ಯಗಳ 5% ಕೂಡ ಸಾಧಿಸದವರು ಇಂದು ಅವರ ಬಗ್ಗೆ ಮಾತನಾಡುವುದು ಜನರಿಗೆ ಸ್ವೀಕಾರಾರ್ಹವೇ? ಎಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜಾ ಪ್ರಶ್ನಿಸಿದ್ದಾರೆ.
ಜನರು ನಿಮ್ಮನ್ನು ರಾಜಕೀಯ ಆರೋಪ–ಪ್ರತ್ಯಾರೋಪಗಳಿಗಾಗಿ ಆರಿಸಿಲ್ಲ. ಅವರು ನಿಮ್ಮನ್ನು ರಸ್ತೆ, ಕುಡಿಯುವ ನೀರು, ವಿದ್ಯುತ್, ಉದ್ಯೋಗ, ಮೂಲಸೌಕರ್ಯ, ರೈತರ ಸಮಸ್ಯೆ, ಯುವಕರ ಭವಿಷ್ಯ—ಇವೆಲ್ಲಕ್ಕೆ ಪರಿಹಾರ ನೀಡಲು ಆರಿಸಿದ್ದಾರೆ. ನಿಮ್ಮ ಜವಾಬ್ದಾರಿಯನ್ನು ತಪ್ಪಿಸಿ ಇತರರ ಮೇಲೆ ಆರೋಪ ಮಾಡುವುದು ಸುಲಭ; ಆದರೆ ಅಭಿವೃದ್ಧಿ ಸಾಧಿಸುವುದು ನಾಯಕತ್ವದ ನಿಜವಾದ ಪರೀಕ್ಷೆ.
ವಿನಯ್ ಕುಮಾರ್ ಸೊರಕೆ ಅವರು ಸಚಿವರಾಗಿದ್ದ ಅವಧಿಯಲ್ಲಿ ರಾಜಕೀಯ ಭೇದಭಾವ ತೋರದೆ ಎಲ್ಲಾ ಪಂಚಾಯತ್ಗಳಿಗೂ ಸಮಾನ ಅನುದಾನ ನೀಡಿದರು. ಬಿಜೆಪಿ ಆಡಳಿತದಲ್ಲಿದ್ದ ಪಂಚಾಯತ್ಗಳಿಗೂ ಅನುದಾನದಲ್ಲಿ ವ್ಯತ್ಯಾಸ ಮಾಡಲಿಲ್ಲ. ಬಿಜೆಪಿ ಪಂಚಾಯತ್ ಅಧ್ಯಕ್ಷರ ಕೈಯಲ್ಲಿ ಉದ್ಘಾಟನೆಗಳನ್ನು ನಡೆಸಿದರು. ಪಂಚಾಯತ್ ಅಧ್ಯಕ್ಷರ ವಾರ್ಡಿಗೆ 3 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ತರಲು ಸಹಕಾರ ನೀಡಿದರು. ಇದು ಅಭಿವೃದ್ಧಿ ರಾಜಕೀಯದ ಉದಾಹರಣೆ.
ಆದರೆ ಈಗ ಪರಿಸ್ಥಿತಿ ಹೇಗಿದೆ? ನಿಮ್ಮ ಆಡಳಿತದಲ್ಲಿರುವ ಪಂಚಾಯತ್ಗಳಿಗೆ ಮಾತ್ರ ಹೆಚ್ಚು ಅನುದಾನ ಹರಿದುಬರುತ್ತಿದೆಯೇ? ಇತರ ಪಂಚಾಯತ್ಗಳಿಗೆ ಎಷ್ಟು ಅನುದಾನ ನೀಡಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸಿದ್ಧರಾಗಿದ್ದೀರಾ?
ರಾಜಕೀಯದಲ್ಲಿ ಆರೋಪ ಮಾಡುವುದು ಸುಲಭ. ಆದರೆ ಸಮಾನತೆ, ಪಾರದರ್ಶಕತೆ ಮತ್ತು ಅಭಿವೃದ್ಧಿ ಸಾಧಿಸುವುದು ಕಷ್ಟ. ಆದ್ದರಿಂದ ಸೊರಕೆ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುವ ಮೊದಲು, ನಿಮ್ಮ ಆಡಳಿತದ ಕಾರ್ಯಕ್ಷಮತೆ ಬಗ್ಗೆ ಆತ್ಮಪರಿಶೀಲನೆ ಮಾಡಿಕೊಳ್ಳಿ. ಜನತೆ ಜಾಗೃತರಾಗಿದ್ದಾರೆ. ಅವರು ಮಾತಿಗಿಂತ ಕೆಲಸವನ್ನು ಹೆಚ್ಚು ಮೌಲ್ಯಮಾಪನ ಮಾಡುತ್ತಾರೆ ಎಂದು ಮೆಲ್ವಿನ್ ಡಿಸೋಜಾ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
