ಮೃತರ ಖಾತೆಗೆ ಜಮೆಯಾದ ಹಣವನ್ನು ಹಿಂಪಡೆಯಲು ತ್ವರಿತ ಕ್ರಮವಹಿಸಲು ಭರತ್ ಮುಂಡೋಡಿ ಸೂಚನೆ
ಮಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮೃತ ಫಲಾನುಭವಿಗಳಿಗೆ ಬಿಡುಗಡೆಯಾಗಿರುವ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.
ದ.ಕ.ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮರಣ ಹೊಂದಿದವರ ಮಾಹಿತಿಯು ಗ್ರಾಪಂ ಹಾಗೂ ತಾಪಂ ಕಚೇರಿಗಳಲ್ಲಿ ಲಭ್ಯವಿರುವುದರಿಂದ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸ ಬೇಕು. ಆ ಮಾಹಿತಿಯನ್ನು ಪರಿಶೀಲಿಸಿ, ತಾಲೂಕು ಮಟ್ಟದ ಸಭೆಗೆ ಸಲ್ಲಿಸಬೇಕು. ಗೃಹಲಕ್ಷ್ಮಿ ಯೋಜನೆಯಡಿ ದುರುಪಯೋಗವಾಗಿರುವ ಹಣವನ್ನು ಮರುಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ವಿಳಂಬವಿಲ್ಲದೆ ಮಾಹಿತಿ ಸಂಗ್ರಹಣೆ ಹಾಗೂ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭರತ್ ಮುಂಡೋಡಿ ಸೂಚಿಸಿದರು.
ಪಡಿತರ ಚೀಟಿಗೆ ಸಂಬಂಧಿಸಿದಂತೆ ಇ-ಕೆವೈಸಿ ಮಾಡಬೇಕಾಗಿದೆ. ಪ್ರಸಕ್ತ ಶೇ. 89ರಷ್ಟು ಇ-ಕೆವೈಸಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ವಿಶೇಷ ಚೇತನರು ಬಸ್ ಹತ್ತಿದಾಗ ಸೀಟುಗಳನ್ನು ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಕೆಎಸ್ಸಾರ್ಟಿಸಿ ಅಧಿಕಾರಿ ವಿಶೇಷ ಚೇತನರಿಗೆ ಮೀಸಲಿರಿಸಿದ ಜಾಗಕ್ಕೆ ಸ್ಟಿಕ್ಕರನ್ನು ಅಂಟಿಸಬೇಕು ಮತ್ತು ಬಸ್ಸಿಗೆ ಹತ್ತುವ ವಿಶೇಷ ಚೇತನರಿಗೆ ಮೀಸಲಿರಿಸಿದ ಜಾಗವನ್ನು ಬಿಟ್ಟುಕೊಡುವಂತೆ ಚಾಲಕ/ನಿರ್ವಾಹಕರಿಗೆ ತಿಳುವಳಿಕೆ ನೀಡಲಾಗಿದೆ ಎಂದು ಹೇಳಿದರು.
ಯುವನಿಧಿ ಯೋಜನೆಯ ಕುರಿತು ಅರ್ಹ ಯುವಜನರಿಗೆ ಸಮರ್ಪಕ ಮಾಹಿತಿ ತಲುಪಿಸುವ ಉದ್ದೇಶದಿಂದ ಜಿಲ್ಲೆಯ ಕಾಲೇಜುಗಳ ನೋಟಿಸ್ ಬೋರ್ಡ್ಗಳಲ್ಲಿ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಭರತ್ ಮುಂಡೋಡಿ ಸೂಚಿಸಿದರು.
ಈ ಸಂದರ್ಭ ವಿಭಾಗೀಯ ಮಟ್ಟದ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ದ.ಕ. ಜಿಪಣ ಸಿಇಒ ನರ್ವಾಡೆ ವಿನಾಯಕ್ ಕಾರ್ಬಾರಿ, ಸಮಿತಿಯ ಉಪಾಧ್ಯಕ್ಷರಾದ ಸುರೇಖಾ ಚಂದ್ರಹಾಸ್, ಶೇಖರ್ ಕುಕ್ಕೆಡಿ, ನಾರಾಯಣ ನಾಯಕ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೈಮೆಂಟ್ ಕುಟಿನ್ಹ, ಜಯಂತಿ ಬಿಎ, ಪಿ.ಎಸ್. ಗಂಗಾಧರ್, ಉಮಾನಾಥ್ ಶೆಟ್ಟಿ, ಆಲಿಸ್ಟನ್ ಕ್ಲೈವ್ ಡಿ ಕುನ್ಹ, ಎಸ್. ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
