ಗ್ಯಾರಂಟಿ ಸಮಾವೇಶಕ್ಕೆ ಬಿಜೆಪಿ ಶಾಸಕರ ವಿರೋಧ ಜನವಿರೋಧಿ ನಿಲುವಿಗೆ ಸಾಕ್ಷಿ: ಪ್ರಸಾದ್ ರಾಜ್ ಕಾಂಚನ್
ಉಡುಪಿ: ಪಂಚ ಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತಿರುವ ಬಿಜೆಪಿ ಹಾಗೂ ಅದರ ಶಾಸಕರ ನಿಲುವು ಜನವಿರೋಧಿಯಾಗಿದೆ. ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ನೇತೃತ್ವದಲ್ಲಿ ಆಯೋಜಿಸಿರುವ ಫಲಾನುಭವಿಗಳ ಸಮಾವೇಶ ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿದ್ದು, ಅದನ್ನು ರಾಜಕೀಯ ಕಾರ್ಯಕ್ರಮವೆಂದು ಬಿಂಬಿಸುವ ಮೂಲಕ ಬಿಜೆಪಿ ಶಾಸಕರು ತಮ್ಮ ದ್ವಂದ್ವ ನಿಲುವನ್ನು ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆರೋಪಿಸಿದ್ದಾರೆ.
ಚುನಾವಣಾ ಪೂರ್ವ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ಲಕ್ಷಾಂತರ ಜನರಿಗೆ ಆರ್ಥಿಕ ಆಸರೆಯಾಗಿವೆ. ಕರ್ನಾಟಕದ ಗ್ಯಾರಂಟಿ ಮಾದರಿಯನ್ನು ಇತರ ರಾಜ್ಯಗಳೂ ಅನುಸರಿಸುತ್ತಿವೆ. ಇತರ ರಾಜ್ಯಗಳಲ್ಲಿ ಇದೇ ಮಾದರಿಯ ಯೋಜನೆಗಳನ್ನು ಘೋಷಿಸುವ ಬಿಜೆಪಿ, ಕರ್ನಾಟಕದಲ್ಲಿ ಅವುಗಳನ್ನು ಟೀಕಿಸುತ್ತಿರುವುದು ವಿರೋಧಾಭಾಸ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕರಾಗಿ, ಸಚಿವರಾಗಿ ಅಧಿಕಾರದಲ್ಲಿದ್ದಾಗ ಸರ್ಕಾರಿ ಹಣದಲ್ಲಿ ರಾಜಕೀಯ ಪ್ರಚಾರದ ಕಾರ್ಯಕ್ರಮಗಳನ್ನು ನಡೆಸಿ, ಸರ್ಕಾರಿ ಕಾರ್ಯಕ್ರಮಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಕಾರ್ಕಳ ಉತ್ಸವ, ಬೈಂದೂರು ಉತ್ಸವ, ಕಾಪು ಬೀಚ್ ಉತ್ಸವ ಹಾಗೂ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆಗೆ ಹಣ ಎಲ್ಲಿಂದ ಸಂಗ್ರಹಿಸಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸಲಿ. ಅಂತಹವರಿಗೆ ಗ್ಯಾರಂಟಿ ಸಮಾವೇಶವೂ ರಾಜಕೀಯ ಕಾರ್ಯಕ್ರಮದಂತೆ ಕಾಣುವುದರಲ್ಲಿ ಅಚ್ಚರಿಯಿಲ್ಲ ಎಂದು ಕಾಂಚನ್ ಟೀಕಿಸಿದ್ದಾರೆ.
ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಗ್ರಾಮೀಣ ಹಾಗೂ ನಗರ ಫಲಾನುಭವಿಗಳಿಗೆ ಯೋಜನೆಗಳು ಪರಿಣಾಮಕಾರಿಯಾಗಿ ತಲುಪಲು ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲೂ ಸಮಿತಿಗಳನ್ನು ರಚಿಸಲಾಗಿದೆ. ದೀನದಲಿತರು, ನಿರ್ಗತಿಕರು ಹಾಗೂ ಬಡವರ ಪರವಾಗಿ ಕೆಲಸ ಮಾಡಲು ಕಾಂಗ್ರೆಸ್ ಬದ್ಧವಾಗಿದೆ. ಬಿಜೆಪಿ ಮತ್ತು ಅದರ ಶಾಸಕರು ತಮ್ಮ ನಿಲುವು ಬದಲಿಸಿ ಯೋಜನೆಗಳಿಗೆ ಬೆಂಬಲ ನೀಡಬೇಕು. ವಿರೋಧಿಸುವ ಶಾಸಕರಿಗೆ ಮುಂದಿನ ಚುನಾವಣೆಗಳಲ್ಲಿ ಫಲಾನುಭವಿಗಳೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
