ಕದ್ರಿ ಶಿವಭಾಗ್ ರಸ್ತೆ ದುರಸ್ತಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ವಾರ್ಡ್ನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಅನುದಾನ ಬಿಡುಗಡೆ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪಾಲಿಕೆಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಹದಗೆಟ್ಟಿರುವ ರಸ್ತೆಯ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-1ರ ಅಡಿಯಲ್ಲಿ ಅಗತ್ಯ ಅನುದಾನ ಮೀಸಲಿಡಲಾಗಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅನುದಾನವನ್ನು ತಡೆಹಿಡಿದ ಪರಿಣಾಮ ರಸ್ತೆ ದುರಸ್ತಿಯಾಗದೆ ಸ್ಥಳೀಯರು ಪ್ರತಿದಿನ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದರೂ, ಸಮಸ್ಯೆ ಪರಿಹಾರಕ್ಕೆ ಆಡಳಿತದ ಕಡೆಯಿಂದ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಜನರ ನ್ಯಾಯಯುತ ಬೇಡಿಕೆಗಳಿಗೆ ತಮ್ಮ ಬೆಂಬಲ ಸದಾ ಇರಲಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಗುಂಡಿಗಳಿಂದ ಸಮಸ್ಯೆ ಎದುರಿಸುತ್ತಿರುವ ವಾರ್ಡ್ಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಮುಗಿದು ಎರಡು ವರ್ಷಗಳಾಗಿದ್ದರೂ, ನಿಕಟಪೂರ್ವ ಪಾಲಿಕೆ ಸದಸ್ಯರ ದೂರವಾಣಿ ಕರೆಗಳನ್ನೂ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎಂದು ವೇದವ್ಯಾಸ ಕಾಮತ್ ಆಕ್ಷೇಪಿಸಿದರು. ಅಧಿಕಾರಿಗಳು ಜನಪ್ರತಿನಿಧಿಗಳ ಅಹವಾಲುಗಳಿಗೆ ಸ್ಪಂದಿಸದಿದ್ದರೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಾವ್ಯ ನಟರಾಜ್ ಆಳ್ವ, ಮನೋಹರ್ ಶೆಟ್ಟಿ ಕದ್ರಿ, ಶಕೀಲಾ ಖಾವ, ಪ್ರಮುಖರಾದ ವಿಕ್ರಮ್ ಚೌಟ, ಜಯಕುಮಾರ್, ರವಿಚಂದ್ರ, ಪ್ರವೀಣ್ ನಿಡ್ಡೇಲ್, ರಾಮಚಂದ್ರ ಚೌಟ, ಅಶ್ವಿತ್ ಕೊಟ್ಟಾರಿ, ಕಿರಣ್ ದೇವಾಡಿಗ, ರಾಮ್ ಪ್ರಸಾದ್, ನವೀನ್ ಶೆಣೈ, ದೀಪಕ್ ಡಿಸೋಜ, ಟೀನಾ, ಜೆಸೆಲ್, ಕಮಲಾಕ್ಷಿ, ಚರಣ್ ಶೆಟ್ಟಿ, ಪ್ರಶಾಂತ್ ಆಳ್ವ, ವೆಂಕಟೇಶ್, ವರುಣ್ ಅಂಬಟ್, ಋತ್ವಿಕ್ ಕದ್ರಿ, ಆಲ್ವಿನ್, ವಿಜಯ್ ಭಂಡಾರಿ, ಗೋಪಾಲ್, ಯೋಗೀಶ್ ಶೆಣೈ, ಅರ್ಚನಾ ಆಳ್ವ, ಭಾಸ್ಕರ್ ಚಂದ್ರ ಶೆಟ್ಟಿ, ಮಹಾಬಲ ಕುಲಾಲ್, ಪ್ರಶಾಂತ್ ಕಂಕನಾಡಿ, ನಟರಾಜ್ ಆಳ್ವ ಸೇರಿದಂತೆ ಹಲವು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
