ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ : ಕರಾವಳಿ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆ; ಪ್ರಶಾಂತ್ ಜತ್ತನ್ನ
ಉಡುಪಿ: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರಾವಳಿ ಭಾಗದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ, ಆಡಳಿತವನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಜನರ ಸಮಸ್ಯೆಗಳನ್ನು ನೇರವಾಗಿ ಅರಿತುಕೊಂಡು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಬಗ್ಗೆ ಕರಾವಳಿಗರಲ್ಲಿ ನಿರೀಕ್ಷೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿ, ಐಟಿ ಪಾರ್ಕ್ಗಳ ಸ್ಥಾಪನೆ, ಮೀನುಗಾರಿಕೆ ಕ್ಷೇತ್ರದ ಬಲವರ್ಧನೆ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನಗಳು ಹೊರಬರುವ ಸಾಧ್ಯತೆಯಿದೆ. ಕೈಗಾರಿಕೆ ಮತ್ತು ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸುವ ಮೂಲಕ ಕರಾವಳಿಯ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ಪ್ರಯತ್ನ ನಡೆಯಲಿದ್ದು, ಇದರಿಂದ ಸ್ಥಳೀಯ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಜತ್ತನ್ನ ಅಭಿಪ್ರಾಯಪಟ್ಟಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದರ ಜತೆಗೆ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ನಿಯಮಗಳ ಸರಳೀಕರಣ, ಹೂಡಿಕೆ ಪ್ರಕ್ರಿಯೆ ಸುಗಮಗೊಳಿಸುವ ಸಿಂಗಲ್ ವಿಂಡೋ ವ್ಯವಸ್ಥೆ, ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಹಾಗೂ ಕೈಗಾರಿಕಾ ಬೆಳವಣಿಗೆಯ ಮೂಲಕ ಉದ್ಯೋಗ ಸೃಷ್ಟಿಸುವ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಪ್ರದೇಶವು ನೈಸರ್ಗಿಕ ಸೌಂದರ್ಯ, ಕಡಲತೀರಗಳು, ಧಾರ್ಮಿಕ ಕ್ಷೇತ್ರಗಳು, ನದಿಗಳು, ದ್ವೀಪಗಳು, ವೈವಿಧ್ಯಮಯ ಸಂಸ್ಕೃತಿ ಹಾಗೂ ವಿಶಿಷ್ಟ ಆಹಾರ ಪದ್ಧತಿಗೆ ಹೆಸರುವಾಸಿಯಾಗಿದೆ. ಪ್ರವಾಸೋದ್ಯಮದ ಅಪಾರ ಅವಕಾಶಗಳಿದ್ದರೂ, ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗದ ಹಿನ್ನೆಲೆಯಲ್ಲಿ ಈ ಭಾಗದ ಅನೇಕ ಯುವಕರು ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಿದ್ದಾರೆ.
ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವುದು ಕರಾವಳಿಯ ಪ್ರಮುಖ ಅಗತ್ಯವಾಗಿದ್ದು, ಕೈಗಾರಿಕೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಹಾಗೂ ಮೀನುಗಾರಿಕೆ ಕ್ಷೇತ್ರಗಳಿಗೆ ಹೆಚ್ಚಿನ ಉತ್ತೇಜನ ದೊರೆತರೆ ಯುವಕರ ವಲಸೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಧಾರಗಳು ಕೈಗೊಳ್ಳುವ ವಿಶ್ವಾಸವಿದೆ ಎಂದು ಜತ್ತನ್ನ ತಿಳಿಸಿದ್ದಾರೆ.
ಇದರೊಂದಿಗೆ ಕರಾವಳಿ ಭಾಗವನ್ನು ನಿರಂತರವಾಗಿ ಕಾಡುತ್ತಿರುವ ನೆರೆ ಹಾಗೂ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು, ಮರಳು ಲಭ್ಯತೆ, ಕೆಂಪುಕಲ್ಲು ಹಾಗೂ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಹಲವು ಸ್ಥಳೀಯ ವಿಚಾರಗಳು ಕೂಡ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆಯಿದೆ.
ಕರಾವಳಿಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವರ್ಷಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ಅವಕಾಶ ಈ ಸಭೆಯಿಂದ ದೊರೆತಿದ್ದು, ಮೂಲಸೌಕರ್ಯ, ಉದ್ಯೋಗ, ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಹಾಗೂ ಕರಾವಳಿ ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ನಿರ್ಣಯ ಕೈಗೊಳ್ಳುವ ಮೂಲಕ ಈ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ಸಿಗುವ ನಿರೀಕ್ಷೆಯಿದೆ ಎಂದು ಪ್ರಶಾಂತ್ ಜತ್ತನ್ನ ಹೇಳಿದ್ದಾರೆ.
