ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಸಂಚಾರ ಮಾರ್ಗ ಬದಲಾವಣೆ, ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಮನವಿ
ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಸೆಪ್ಟೆಂಬರ್ 18ರಂದು ಬೆಳಗ್ಗೆ ಮಂಗಳೂರು ನಗರದ ಪಡೀಲ್ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ)ಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರ ಸಂಜೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆಯ ಸಚಿವರು ಮಂಗಳೂರಿಗೆ ಆಗಮಿಸಲಿದ್ದು, ಸೆಪ್ಟೆಂಬರ್ 18ರಂದು ಬೆಳಗ್ಗೆ ನಗರದ ಮುಖ್ಯರಸ್ತೆಗಳ ಮೂಲಕ ಪ್ರಜಾಸೌಧಕ್ಕೆ ತೆರಳಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯ ಬಳಿಕ ಮಧ್ಯಾಹ್ನ ಮೇರಿಹಿಲ್ನಲ್ಲಿರುವ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ, ನಂತರ ಮಂಗಳೂರಿಗೆ ವಾಪಸಾಗಿ ತಂಗಲಿದ್ದಾರೆ. ಮರುದಿನ ಬೆಳಗ್ಗೆ ಅವರು ಮಂಗಳೂರಿನಿಂದ ನಿರ್ಗಮಿಸಲಿದ್ದಾರೆ.
ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಭದ್ರತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಗಣ್ಯರ ಸಂಚಾರಕ್ಕೆ ನಿಗದಿಯಾಗಿರುವ ಪ್ರಮುಖ ಮಾರ್ಗಗಳು:
ಸೆ.17ರಿಂದ ಸೆ.19ರವರೆಗೆ: ಬಜಪೆ ವಿಮಾನ ನಿಲ್ದಾಣ–ಕಾವೂರು–ಬೊಂದೆಲ್–ಮೇರಿಹಿಲ್–ಕೆ.ಪಿ.ಟಿ.–ಕದ್ರಿ ಕಂಬಳ–ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಹಂಪನಕಟ್ಟೆ–ಕ್ಲಾಕ್ ಟವರ್–ಹ್ಯಾಮಿಲ್ಟನ್ ಜಂಕ್ಷನ್.
ಸೆ.18ರಂದು: ಹ್ಯಾಮಿಲ್ಟನ್ ಜಂಕ್ಷನ್–ಕ್ಲಾಕ್ ಟವರ್–ಹಂಪನಕಟ್ಟೆ–ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಕೆ.ಪಿ.ಟಿ. ಜಂಕ್ಷನ್–ನಂತೂರು ವೃತ್ತ–ಪಂಪುವೆಲ್–ನಾಗುರಿ–ಬಜಾಲ್ ಕ್ರಾಸ್ (ಪ್ರಜಾಸೌಧ)–ಪಡೀಲ್ ಜಂಕ್ಷನ್.
ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
ಬದ್ರಿಯಾ ಜಂಕ್ಷನ್ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ತೆರಳುವ ಎಲ್ಲಾ ವಾಹನಗಳು ಪರ್ಯಾಯವಾಗಿ ಬದ್ರಿಯಾ ಜಂಕ್ಷನ್–ನಿಲೇಶ್ವರ ರಸ್ತೆ–ರೊಸಾರಿಯೋ ರಸ್ತೆ ಮೂಲಕ ಸಂಚರಿಸಬೇಕು.
ಅದೇ ರೀತಿ ಹ್ಯಾಮಿಲ್ಟನ್ ಜಂಕ್ಷನ್ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಪರ್ಯಾಯವಾಗಿ ಹ್ಯಾಮಿಲ್ಟನ್ ಜಂಕ್ಷನ್–ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು.
ಪಂಪುವೆಲ್ ಜಂಕ್ಷನ್ನಿಂದ ನಾಗುರಿ ಮೂಲಕ ಪಡೀಲ್ ಜಂಕ್ಷನ್ ಕಡೆಗೆ ಹಾಗೂ ಪಡೀಲ್ ಜಂಕ್ಷನ್ನಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪರ್ಯಾಯವಾಗಿ ನಂತೂರು ವೃತ್ತ–ಕೈಕಂಬ–ಮರೋಳಿ ಮಾರ್ಗವಾಗಿ ಅಥವಾ ತೊಕ್ಕೊಟ್ಟು–ದೇರಳಕಟ್ಟೆ–ಮುಡಿಪು–ಬೋಳ್ಳಾರ್–ಮೆಲ್ಕಾರ್ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.
ಬಜಾಲ್ ಕ್ರಾಸ್ (ಪ್ರಜಾಸೌಧ)ನಿಂದ ಬಜಾಲ್ ಕಡೆಗೆ ಹಾಗೂ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣದ ಕಡೆಗೆ ಸಂಚರಿಸುವ ವಾಹನಗಳು ಪಡೀಲ್ ಬಜಾರ್ ಕ್ರಾಸ್ಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರದ ಮೂಲಕ ಬಜಾಲ್ ಕಡೆಗೆ ಸಂಚರಿಸಬೇಕು.
ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಮಹಾಕಾಳಿಪಡ್ಪು–ಮಂಗಳಾದೇವಿ ಮೂಲಕ ನಗರಕ್ಕೆ ತೆರಳುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಲಾಗಿದೆ.
