ಯುವಕನ ಆತ್ಮಹತ್ಯೆ ಪ್ರಕರಣ: ಯುವತಿ ಸೇರಿ 10 ಮಂದಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು
ಉಡುಪಿ: ಯುವತಿಯ ಮನೆಯವರಿಂದ ಹಲ್ಲೆ ಹಾಗೂ ಬೆದರಿಕೆಗೆ ಒಳಗಾಗಿದ್ದ ಎನ್ನಲಾದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ 10 ಮಂದಿ ಹಾಗೂ ಇತರರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ಡೂರು ನಿವಾಸಿ ದಿಲೀಪ್ ಕುಮಾರ್ ನೀಡಿದ ದೂರಿನಂತೆ, ಪ್ರದೀಪ್ ಕಳೆದ ಎಂಟು ವರ್ಷಗಳಿಂದ ಶ್ರಾವ್ಯ ಶೆಟ್ಟಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಅಕ್ಟೋಬರ್ 27ರಂದು ರಾತ್ರಿ ಸುಮಾರು 10 ಗಂಟೆಗೆ ನಾಯರ್ಕೋಡಿನಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಮೂರು ಕಾರುಗಳಲ್ಲಿ ಬಂದಿದ್ದ ಶ್ರಾವ್ಯ ಶೆಟ್ಟಿಯ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ ಹಾಗೂ ಸನತ್, ಕೃಷ್ಣ, ಸುಜಯ್ ಸೇರಿದಂತೆ ಇತರರು ಆತನನ್ನು ಶ್ರಾವ್ಯ ಶೆಟ್ಟಿಯ ಮನೆಗೆ ಕರೆದೊಯ್ದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲಿ ಪ್ರಸನ್ನ ಶೆಟ್ಟಿ ಬೆತ್ತದಿಂದ ಪ್ರದೀಪ್ನ ಕಾಲು ಮತ್ತು ಬೆನ್ನಿಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದು, ಇತರರು ಮರದ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿದ ಪ್ರದೀಪ್ನ ಸಹೋದರ ದಿಲೀಷ್ ಕುಮಾರ್, ಆತನ ವಿಚಾರಣೆಗಾಗಿ ಸ್ನೇಹಿತರನ್ನು ಕಳುಹಿಸಿದ್ದರು. ಸ್ನೇಹಿತರು ಶ್ರಾವ್ಯ ಶೆಟ್ಟಿಯ ಮನೆಗೆ ತಲುಪಿದಾಗ ಆರೋಪಿತರು ಪ್ರದೀಪ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸುತ್ತಿದ್ದರು. ಸ್ನೇಹಿತರನ್ನು ಕಂಡ ಬಳಿಕ ಹಲ್ಲೆ ನಿಲ್ಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 28ರಂದು ಚಿಕಿತ್ಸೆಗಾಗಿ ಪ್ರದೀಪ್ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ ಸಹೋದರನಿಗೆ ಹಿಂದಿನ ರಾತ್ರಿ ನಡೆದ ಹಲ್ಲೆಯ ಬಗ್ಗೆ ವಿವರಿಸಿದ್ದಲ್ಲದೆ, ಶ್ರಾವ್ಯ ಶೆಟ್ಟಿ ಹಾಗೂ ಆಕೆಯ ಸಹೋದರರು ಬೆದರಿಕೆ ಹಾಕಿರುವ ಬಗ್ಗೆಯೂ ತಿಳಿಸಿ ತೀವ್ರ ದುಃಖ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಘಟನೆಯಿಂದ ಮನನೊಂದಿದ್ದ ಪ್ರದೀಪ್, ಅಕ್ಟೋಬರ್ 30ರಂದು ಸಂಜೆ ಸುಮಾರು 5.30ಕ್ಕೆ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಕುತ್ತಿಗೆಗೆ ಬಿಳಿ ಬಣ್ಣದ ಟ್ಯಾಗ್ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರದೀಪ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ್, ಸನತ್, ಹೊರರಾಜ್ಯದ ಇಬ್ಬರು ಕಾರ್ಮಿಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಡುಪಿ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
