ಕಥೊಲಿಕ್ ಸಭಾ ಉಡುಪಿ ಪ್ರದೇಶ ವಾರ್ಷಿಕ ಮಹಾಸಭೆ ಹಾಗೂ ದಿ|ಫ್ರಾನ್ಸಿಸ್ ದಾಂತಿ ಪುಸ್ತಕ ಪುರಸ್ಕಾರ ಪ್ರದಾನ
ಉಡುಪಿ: ಪರರ ಮುಖದಲ್ಲಿ ದೇವರನ್ನು ಕಾಣುವುದರ ಮೂಲಕ ಸಮಾಜದಲ್ಲಿ ಸೇವೆ ಮಾಡುವುದು ಮೊದಲ ಆದ್ಯತೆಯಾಗಬೇಕು ಈ ಮೂಲಕ ಸಂಘಟನೆಗಳು ಸಮಾಜದ ಇಂದಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾದ ಅಗತ್ಯತೆ ಇದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.

ಅವರು ಭಾನುವಾರ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ ಹಾಗೂ ದಿ|ಫ್ರಾನ್ಸಿಸ್ ದಾಂತಿ ಪುಸ್ತಕ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಇಂದು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿನಿತ್ಯ ಎಂಬಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಿದ್ದು ಸಮುದಾಯ ಕೂಡ ಅದೇ ನಿಟ್ಟಿನಲ್ಲಿ ಮುಂದುವರೆಯಬೇಕಾದ ಅವಶ್ಯಕತೆ ಇದೆ. ಶಿಕ್ಷಣ ಸಂಸ್ಥೆಗಳು ಹಳೆಯ ಪದ್ದತಿಯನ್ನು ಕೈಬಿಟ್ಟು ಹೊಸ ಆವಿಷ್ಕಾರಗಳಿಗೆ ಹೊಂದಿಕೊಂಡು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾಗಿದೆ. ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆಯಾಗಿದ್ದು ಧರ್ಮಪ್ರಾಂತ್ಯಕ್ಕೆ ಒಂದು ಉತ್ತಮ ಹಾಗೂ ಸುಸಜ್ಜಿತ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನ ಅಗತ್ಯತೆ ಎದ್ದು ಕಾಣುತ್ತಿದೆ. ಇದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆ ಸಿದ್ದಪಡಿಸುವ ಕೆಲಸ ಆರಂಭವಾಗಿದ್ದು ಸಮುದಾಯದ ಸಹಕಾರ ಅಗತ್ಯವಾಗಿದೆ. ಉತ್ತಮ ಶಾಲೆ ಮತ್ತು ಆಸ್ಪತ್ರೆಯ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರ ಸಖಿ ಸೂಚಿಸಿದ ಸೌಗಂಧ ಕವನ ಸಂಕಲನಕ್ಕೆ 2025 ನೇ ಸಾಲಿನ ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಪುಸ್ತಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಜರಿ ಕ್ರೇಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾದ ಜೊನ್ಸನ್ ಡಿ”ಆಲ್ಮೇಡಾ ಮಾತನಾಡಿ ಸಮುದಾಯದ ಅಭಿವೃದ್ಧಿ ಮತ್ತು ಜಾಗೃತಿ ಮೂಡಿಸುವಲ್ಲಿ, ಸಮುದಾಯಕ್ಕೆ ಅನ್ಯಾಯವಾದಗೆಲ್ಲ ನ್ಯಾಯಕ್ಕಾಗಿ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಿ ಯಶಸ್ಸು ಕಂಡುಕೊಳ್ಳುವಲ್ಲಿ ಕಥೊಲಿಕ್ ಸಭಾ ಸಂಘಟನೆಯ ಕಾರ್ಯ ಶ್ಲಾಘನಾರ್ಹವಾದುದು ಎಂದರು.
ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹ ವಹಿಸಿದ್ದರು.
ಸಭೆಯಲ್ಲಿ 2025-26 ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ವರದಿ, ವಾರ್ಷಿಕ ಮಹಸಭೆಯ ವರದಿ, ವಾರ್ಷಿಕ ಲೆಕ್ಕಪತ್ರ ಮಂಡನೆ, ಮಾನಸ ಸಂಸ್ಥೆ, ಸಶಕ್ತ ಸಮುದಾಯ ಸೇವಾ ಟ್ರಸ್ಟಿನ ವರದಿಯನ್ನು ಮಂಡಿಸಲಾಯಿತು.
2026 -27 ನೇ ಸಾಲಿನ ಕಥೊಲಿಕ್ ಸಭೆಯ ಡೈರಕ್ಟರಿ ಅನಾವರಣಗೊಳಿಸಲಾಯಿತು. ದಿವಂಗತ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಆಗಮಿಸಿ ಶುಭಹಾರೈಸಿದರು
ಅತ್ಯಧಿಕ ಸಹಾಯಧನ ಕೂಪನ್ ವಿತರಣೆ, ಆಮ್ಚೊ ಸಂದೇಶ್ ಜಾಹೀರಾತು ಹಾಗೂ ಚಂದಾದಾರರನ್ನು ಸಂಗ್ರಹಿಸಿದ ಸದಸ್ಯರಿಗೆ ಹಾಗೂ ಘಟಕಗಳಿಗೆ ಗುರುತಿಸಿ ಗೌರವಿಸಲಾಯಿತು. ಅತ್ಯಧಿಕ ಸದಸ್ಯರನ್ನು ನೊಂದಾಯಿಸಿದ ಘಟಕ ಹಾಗೂ ವಲಯಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಆಲ್ಫೋನ್ಸ್ ಡಿಸೋಜಾ ಅವರ ಸಣ್ಣ ಕಥೆಗಳ ಸಂಗ್ರಹ ಘಡಿತಾಚೆ ಬುಳ್ಬುಳೆ ಪುಸ್ತಕ ಅನಾವರಣ ಮಾಡಲಾಯಿತು.
ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಚರ್ಚಿನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಉಪಾಧ್ಯಕ್ಷರಾದ ಜುಲಿಯಾನ್ ರೊಡ್ರಿಗಸ್, ಘಟಕಾಧ್ಯಕ್ಷೆ ಆಗ್ನೆಸ್ ಬಾರ್ಬೋಜಾ, ಶಾಲೆಯ ಪ್ರಾಂಶುಪಾಲ ವಂ|ರೊಲ್ವಿನ್ ಆರಾನ್ಹಾ, ನಿಕಟಪೂರ್ವ ಅಧ್ಯಕ್ಷರಾದ ರೊನಾಲ್ಡ್ ಡಿಆಲ್ಮೇಡಾ, ಕೋಶಾಧಿಕಾರಿ ಗ್ಯಾರಿಫೀಲ್ಡ್ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷರಾದ ಲೂವಿಸ್ ಡಿಸೋಜಾ, ಸಹಕಾರ್ಯದರ್ಶಿ ಸೋನು ಸಿಕ್ವೇರಾ, ಸಹ ಕೋಶಾಧಿಕಾರಿ ಪ್ರತಿಮಾ ಡಿಸೋಜಾ, ದಾಂತಿ ಸ್ಮಾರಕ ಟ್ರಸ್ಟಿನ ಸಂಚಾಲಕರಾದ ಆಲ್ಫೋನ್ಸ್ ಡಿಕೋಸ್ತಾ, ಕುಟುಂಬ ಸದಸ್ಯರಾದ ಚಾರ್ಲ್ಸ್ ದಾಂತಿ, ಮಾನಸ ಸಂಸ್ಥೆಯ ಅಧ್ಯಕ್ಷರಾದ ಜೋನ್ ಮಾರ್ಟಿಸ್, ವಲಯಾಧ್ಯಕ್ಷರಾದ ಜೊಯೇಲ್ ಆಲ್ಮೇಡಾ, ಶೈಲಾ ಡಿ ಆಲ್ಮೇಡಾ, ಜೆರಾಲ್ಡ್ ರೊಡ್ರಿಗಸ್, ಅಂತೋನಿ ಮಿರಾಂದಾ, ಜೋನ್ ಕಿರಣ್ ಲೂವಿಸ್, ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ಎಲ್ ರೋಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್, ಡಾ. ಜೆರಾಲ್ಡ್ ಪಿಂಟೊ ಹಾಗೂ ಇತರರು ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಮೇಬಲ್ ಡಿಸೋಜಾ ಸ್ವಾಗತಿಸಿ, ಕಾರ್ಯ ದರ್ಶಿ ಜುಲಿಯೆಟ್ ಡಿಸೋಜಾ ವಂದಿಸಿದರು.