ಕಾವೇರಿ ವನ್ಯಧಾಮ ಎನ್ಕೌಂಟರ್ ಪ್ರಕರಣ: ಎಸ್ ಐ ಟಿ ತನಿಖೆಗೆ ಐವನ್ ಡಿಸೋಜ ಆಗ್ರಹ
ಮರಿಯಮಂಗಲ: ಕಾವೇರಿ ವನ್ಯಧಾಮದಲ್ಲಿ ನಡೆದ ಎನ್ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಬದಲಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ಮೂಲಕ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಆಗ್ರಹಿಸಿದ್ದಾರೆ.
ಮರಿಯಮಂಗಲದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ತನಿಖೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ಎಸ್ಐಟಿ ತನಿಖೆಯೇ ಸೂಕ್ತವಾಗಿದೆ. ಎಸ್ಐಟಿ ತನಿಖೆ ನಡೆದರೆ ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಕಾವೇರಿ ವನ್ಯಧಾಮದಲ್ಲಿ ನಡೆದ ಇಡೀ ಘಟನೆ ಖಂಡನೀಯವಾಗಿದ್ದು, ಅರಣ್ಯಾಧಿಕಾರಿಗಳ ಕ್ರಮವನ್ನು ಕ್ಷಮಿಸಲು ಸಾಧ್ಯವಿಲ್ಲ. ಅರಣ್ಯಾಧಿಕಾರಿಗಳು ಮಿತಿಮೀರಿ ವರ್ತಿಸಿದ್ದಾರೆ. ಯಾರಿಗೂ ಮತ್ತೊಬ್ಬರ ಜೀವ ತೆಗೆಯುವ ಅಧಿಕಾರವಿಲ್ಲ. ಬಂದೂಕನ್ನು ಯಾವ ಸಂದರ್ಭದಲ್ಲಿ ಬಳಸಬೇಕು ಎಂಬ ಪರಿಜ್ಞಾನ ಅಧಿಕಾರಿಗಳಿಗೆ ಇರಬೇಕಿತ್ತು ಎಂದು ಟೀಕಿಸಿದರು.
ಮೂವರು ಅಮಾಯಕರನ್ನು ಬಲಿ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಐವಾನ್ ಡಿಸೋಜ, ಮೃತರ ಕುಟುಂಬಗಳಿಗೆ ಕನಿಷ್ಠ ₹1 ಕೋಟಿ ಪರಿಹಾರ ಘೋಷಿಸಬೇಕು ಹಾಗೂ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ ಎಂದು ಅರಣ್ಯ ಸಚಿವರು ಹೇಳುತ್ತಿದ್ದಾರೆ. ಆದರೆ ಮೃತರು ಎಲ್ಲಿಯೂ ಅರಣ್ಯ ಸಿಬ್ಬಂದಿ ಮೇಲೆ ಗುಂಡು ಹಾರಿಸಿಲ್ಲ. ಹೀಗಿರುವಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವ ಅಗತ್ಯವೇನಿತ್ತು ಎಂದು ಐವಾನ್ ಡಿಸೋಜ ಪ್ರಶ್ನಿಸಿದರು.
