ರೊಟರಾಕ್ಟ್ ಸುಭಾಷ್ ನಗರ ನೂತನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಆಯ್ಕೆ
2026–27ನೇ ಸಾಲಿನ ರೊಟರಾಕ್ಟ್ ಕ್ಲಬ್ ಆಫ್ ಸುಭಾಷ್ ನಗರದ ನೂತನ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಆಯ್ಕೆಯಾಗಿದ್ದಾರೆ.
ಸುಮಾರು ಎರಡು ದಶಕಗಳಿಂದ ರೊಟರಾಕ್ಟ್ ಸುಭಾಷ್ ನಗರದ ಸಕ್ರಿಯ ಸದಸ್ಯರಾಗಿರುವ ಚಿದಾನಂದ ಪೂಜಾರಿ, ನಾಲ್ಕು ಬಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಂಘಟನೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಪೋಲಿಯೋದಿಂದ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ ಇವರು ಆತ್ಮವಿಶ್ವಾಸ ಮತ್ತು ಛಲವನ್ನು ಜೀವನದ ಶಕ್ತಿಯನ್ನಾಗಿಸಿಕೊಂಡಿರುವ ಇವರು ಕುಂಜಾರುಗಿರಿ ಕ್ರಾಸ್‌ನಲ್ಲಿರುವ ತಮ್ಮ ಮೊಬೈಲ್ ಅಂಗಡಿಯನ್ನು ಯಶಸ್ವಿಯಾಗಿ ನಡೆಸುತ್ತಾ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಅಚ್ಚಡದಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಶಂಕರಪುರದ ಸೈಂಟ್ ಜಾನ್ಸ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿರುವ ಚಿದಾನಂದ ಪೂಜಾರಿ, ರೊಟರಾಕ್ಟ್ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಗೆ Outstanding Rotaractor Award, ಪಂಚರತ್ನ ಪ್ರಶಸ್ತಿ, Best Secretary Award ಹಾಗೂ DR Citation Award ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.
ಇದರ ಜೊತೆಗೆ ಹವ್ಯಾಸಿ ಸಂಗೀತ ಕಲಾವಿದರಾಗಿರುವ ಅವರು ತಮ್ಮ ಸರಳ ವ್ಯಕ್ತಿತ್ವ, ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ರೊಟರಾಕ್ಟ್ ಸುಭಾಷ್ ನಗರದ 20ನೇ ವರ್ಷದ ಅಧ್ಯಕ್ಷರಾಗಿ ಚಿದಾನಂದ ಪೂಜಾರಿ ಆಯ್ಕೆಯಾಗಿರುವುದು ಕ್ಲಬ್ ಸದಸ್ಯರು ಹಾಗೂ ಸಮಾಜದ ಎಲ್ಲರಿಗೂ ಹೆಮ್ಮೆಯ ಮತ್ತು ಸಂತಸದ ಸಂಗತಿಯಾಗಿದೆ.
