ಮಗುವಿನ ಚಿನ್ನದ ಸರ ಎಳೆದುಕೊಂಡು ಹೋದ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವ್ಯಕ್ತಿಗೆ ಸಂಬಂಧವಿಲ್ಲ – ವಿಟ್ಲ ಪೊಲೀಸರ ಸ್ಪಷ್ಟನೆ
ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಪದವು ಪ್ರದೇಶದಲ್ಲಿ 7 ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಸಿ ಎಳೆದುಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ.
ಏಪ್ರಿಲ್ 12ರಂದು ನಡೆದ ಈ ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 309(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ನಡುವೆ, ಪ್ರಕರಣದ ಆರೋಪಿಯೆಂದು ಹೇಳಿ ಕೆ.ಟಿ.ಎಂ ಬೈಕ್ ಸವಾರನೊಬ್ಬನ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ಆ ಬೈಕ್ ಸವಾರನನ್ನು ವಿಚಾರಣೆಗೊಳಪಡಿಸಿದಾಗ, ಮಗುವಿನ ಚಿನ್ನದ ಸರ ಎಳೆದುಕೊಂಡು ಹೋದ ಘಟನೆಗೂ ಆತನಿಗೆ ಯಾವುದೇ ಸಂಬಂಧ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಸಂಬಂಧಿತ ಬೈಕ್ ಸವಾರನ ಬಗ್ಗೆ ತಪ್ಪು ಅಭಿಪ್ರಾಯಗಳು ಮೂಡದಂತೆ, ಅವರ ಕುಟುಂಬದವರ ಕೋರಿಕೆಯ ಮೇರೆಗೆ ಪೊಲೀಸರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ನಿಜವಾದ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
