ಕರಾವಳಿ ಸಚಿವ ಸಂಪುಟ ಸಭೆ: 5,000 ಕೋಟಿ ರೂ. ವಿಶೇಷ ಪ್ಯಾಕೇಜ್ ಸೇರಿ ಪ್ರಮುಖ ಬೇಡಿಕೆಗಳಿಗೆ ಶಾಸಕ ಮಂಜುನಾಥ್ ಭಂಡಾರಿ ಮನವಿ
- ಮಂಗಳೂರಿನಲ್ಲಿ ಸೆ.18ಕ್ಕೆ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಸಿಎಂಗೆ ಮನವಿ
ಬೆಂಗಳೂರು: ಕರಾವಳಿ ಭಾಗದಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಈ ಭಾಗದ ಸುದೀರ್ಘ ಬೇಡಿಕೆಗಳು ಹಾಗೂ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಮಗ್ರ ಮನವಿ ಪತ್ರ ಸಲ್ಲಿಸಿದ್ದಾರೆ.
ಕರಾವಳಿ ಜಿಲ್ಲೆಗಳ ಆರ್ಥಿಕತೆ, ಮೀನುಗಾರಿಕೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಹಾಗೂ ಸಂಸ್ಕೃತಿಯ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 5,000 ಕೋಟಿ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸುವಂತೆ ಅವರು ಕೋರಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಈ ಬಗ್ಗೆ ಅಗತ್ಯ ಕ್ರಮವಹಿಸಿ, ಪ್ರಮುಖ ಅಂಶಗಳನ್ನು ಸಂಪುಟ ಅಜೆಂಡಾದಲ್ಲಿ ಸೇರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯು ಕರಾವಳಿಯ ನೈಜ ಸಮಸ್ಯೆಗಳಿಗೆ ಸ್ಪಂದಿಸಲು ಸೂಕ್ತ ವೇದಿಕೆಯಾಗಿದೆ ಎಂದು ಉಲ್ಲೇಖಿಸಿರುವ ಅವರು, ಯುವಜನರಿಗೆ ಸ್ಥಳೀಯ ಉದ್ಯೋಗಾವಕಾಶ ಒದಗಿಸುವ ಸುಧಾರಿತ ಕೌಶಲ್ಯಾಭಿವೃದ್ಧಿ ಕೇಂದ್ರ, ಕರಾವಳಿ ಸವೆತಕ್ಕೆ ಶಾಶ್ವತ ಪರಿಹಾರ, ರೈತರು ಹಾಗೂ ಮೀನುಗಾರರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಯೋಜನೆಗಳಿಗೆ ತಕ್ಷಣವೇ ಆಡಳಿತಾತ್ಮಕ ಅನುಮೋದನೆ ಹಾಗೂ ಅಗತ್ಯ ಅನುದಾನ ಕಲ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇತರ ಪ್ರಮುಖ ಬೇಡಿಕೆಗಳು
• ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜು ಮೇಲ್ದರ್ಜೆಗೆ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಕೃಷಿ/ತೋಟಗಾರಿಕೆ ಡಿಪ್ಲೋಮಾ ಕಾಲೇಜನ್ನು ‘ಕೃಷಿ ವಿಶ್ವವಿದ್ಯಾಲಯ’ವಾಗಿ ಮೇಲ್ದರ್ಜೆಗೇರಿಸುವುದು. ಇಲ್ಲಿ ಲಭ್ಯವಿರುವ 342 ಎಕರೆ ಭೂಮಿ ಹಾಗೂ ₹20 ಕೋಟಿ ಮೌಲ್ಯದ ಮೂಲಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಹೆಚ್ಚುವರಿಯಾಗಿ ₹10 ಕೋಟಿ ಅನುದಾನ ಮತ್ತು ಗುತ್ತಿಗೆ ಆಧಾರದ ಮೇಲೆ 10 ಬೋಧಕ ಸಿಬ್ಬಂದಿಗಳನ್ನು ನೇಮಿಸಿ ಪದವಿ ಮಹಾವಿದ್ಯಾಲಯ ಆರಂಭಿಸುವುದು.
• ಡಿಪ್ಲೋಮಾ ಕೋರ್ಸ್ಗಳ ಸ್ಥಳಾಂತರ: ಬ್ರಹ್ಮಾವರ ಕ್ಯಾಂಪಸ್ನಲ್ಲಿ ಈಗ ನಡೆಯುತ್ತಿರುವ ಕೃಷಿ ಡಿಪ್ಲೋಮಾ ಕೋರ್ಸ್ಗಳನ್ನು ದಾವಣಗೆರೆ ಜಿಲ್ಲೆಯ ಕತ್ತಲಗೆರೆಯಲ್ಲಿರುವ ವಿಶ್ವವಿದ್ಯಾಲಯದ ಆವರಣಕ್ಕೆ ಸ್ಥಳಾಂತರಿಸಿ, ಎರಡೂ ಕ್ಯಾಂಪಸ್ಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸುವುದು.
• ಕರಾವಳಿಗೆ ₹5,000 ಕೋಟಿ ವಿಶೇಷ ಪ್ಯಾಕೇಜ್: ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ₹5,000 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿ ಮೂಲಸೌಕರ್ಯ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು.
• ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ: ಕರಾವಳಿ ತೀರದ ಸವೆತವನ್ನು ತಡೆಗಟ್ಟಲು ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಶಾಶ್ವತ ತಡೆಗೋಡೆ ಹಾಗೂ ಅಗತ್ಯ ಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವುದು.
• ಪ್ರತ್ಯೇಕ ಮೀನುಗಾರಿಕಾ ವಿಶ್ವವಿದ್ಯಾಲಯ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ಮೀನುಗಾರಿಕೆ ಕಾಲೇಜನ್ನು ಪ್ರತ್ಯೇಕ ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಿ ಮೀನುಗಾರಿಕೆ, ಜಲಕೃಷಿ, ಸಾಗರ ವಿಜ್ಞಾನ, ಮೀನು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸುವುದು.
• ‘ಕರ್ನಾಟಕ ಮೀನುಗಾರಿಕಾ ಪರಿಷತ್ತು’ ಸ್ಥಾಪನೆ: ರಾಜ್ಯದಲ್ಲಿ ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಮೀನುಗಾರರ ಸಮಸ್ಯೆಗಳ ಪರಿಹಾರ, ಸರ್ಕಾರದ ಯೋಜನೆಗಳ ಜಾರಿ ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಪ್ರತ್ಯೇಕ ಪರಿಷತ್ತು ರಚಿಸುವುದು.
• ಮಂಗಳೂರಿನಲ್ಲಿ ಆಧುನಿಕ ಅಕ್ವಾಪಾರ್ಕ್: ಜಲಕೃಷಿ, ಮೀನು ಸಾಕಾಣಿಕೆ, ಶೀತಲ ಸರಪಳಿ ಹಾಗೂ ಮೌಲ್ಯ ವರ್ಧಿತ ಉತ್ಪನ್ನಗಳ ಮಾರುಕಟ್ಟೆ ಉತ್ತೇಜನಕ್ಕಾಗಿ ಆಧುನಿಕ ಅಕ್ವಾಪಾರ್ಕ್ ಸ್ಥಾಪಿಸಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಮತ್ತು ಹೂಡಿಕೆಗೆ ದಾರಿ ಮಾಡುವುದು.
• ಮೀನುಗಾರರ ಪರಿಹಾರ ಧನ ಹೆಚ್ಚಳ: ಮೀನುಗಾರಿಕೆ ಸಂದರ್ಭದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ಪ್ರಸ್ತುತ ಇರುವ ₹5 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸುವುದು.
• ಬೋಟ್ಗಳ ಡೀಸೆಲ್ ಸಬ್ಸಿಡಿ ಹೆಚ್ಚಳ: ಮೀನುಗಾರರ ಬೋಟ್ಗಳಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವ ಡೀಸೆಲ್ಗೆ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿ, ಇಂಧನ ದರ ಏರಿಕೆಯ ಆರ್ಥಿಕ ಹೊರೆಯನ್ನು ತಗ್ಗಿಸುವುದು.
• ಆಧುನಿಕ ಕೋಲ್ಡ್ ಸ್ಟೋರೇಜ್ ಸೌಲಭ್ಯ: ಮೀನುಗಳ ಸಂಗ್ರಹಣೆ ಹಾಗೂ ಗುಣಮಟ್ಟ ಕಾಪಾಡಲು ಕರಾವಳಿ ಭಾಗದ ಪ್ರಮುಖ ಮೀನುಗಾರಿಕಾ ಕೇಂದ್ರಗಳಲ್ಲಿ ಸುಧಾರಿತ ಕೋಲ್ಡ್ ಸ್ಟೋರೇಜ್ಗಳು ಮತ್ತು ಶೀತಲೀಕರಣ ಘಟಕಗಳನ್ನು ನಿರ್ಮಿಸುವುದು.
• ಮಂಗಳೂರಿನಲ್ಲಿ ಸುಧಾರಿತ ಕೌಶಲ್ಯಾಭಿವೃದ್ಧಿ ಕೇಂದ್ರ: ಕರಾವಳಿಯ 25 ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜುಗಳ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಸ್ಥಳೀಯ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶ ಒದಗಿಸಲು ಉದ್ಯಮಾಧಾರಿತ ಪ್ರಾಯೋಗಿಕ ತರಬೇತಿ ಕೇಂದ್ರ ಸ್ಥಾಪಿಸುವುದು.
• ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಜಮೀನು ಮಂಜೂರಾತಿ: ಪ್ರಾಧಿಕಾರಕ್ಕೆ ಗುತ್ತಿಗೆ ನೀಡಲಾಗಿರುವ 356 ಎಕರೆ ಜಮೀನನ್ನು ನೋಡಲ್ ಇಲಾಖೆಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಮಂಜೂರು ಮಾಡುವುದು.
• ಪಿಲಿಕುಳ ಪ್ರಾಧಿಕಾರ ಮಂಡಳಿಯಾಗಿ ಪರಿವರ್ತನೆ: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಪರಿವರ್ತಿಸಿ, ಅದಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಿಸುವುದು ಹಾಗೂ ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು.
• ಅರ್ಬನ್ ಇಕೋ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವಿಕೆ: ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪಿಲಿಕುಳದಲ್ಲಿ ಕೈಗೆತ್ತಿಕೊಂಡು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ಅರ್ಬನ್ ಇಕೋ ಪಾರ್ಕ್ ಯೋಜನೆಗೆ ಬಾಕಿ ಉಳಿದ ₹12.60 ಕೋಟಿ ಅನುದಾನ ಬಿಡುಗಡೆ ಮಾಡುವುದು.
• ‘ಕರಾವಳಿ ಟೆಂಪಲ್ ಟೂರಿಸಂ’ ಕಾರಿಡಾರ್: ಕಾರವಾರದ ಗೋಕರ್ಣ, ಮುರುಡೇಶ್ವರ; ಉಡುಪಿಯ ಕೊಲ್ಲೂರು ಮೂಕಾಂಬಿಕಾ, ಶ್ರೀ ಕೃಷ್ಣ ಮಠ; ಚಿಕ್ಕಮಗಳೂರಿನ ಶೃಂಗೇರಿ, ಹೊರನಾಡು; ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಮಂಗಳಾದೇವಿ ದೇವಾಲಯಗಳನ್ನು ಬೆಸೆಯುವಂತೆ ಧಾರ್ಮಿಕ ಪ್ರವಾಸೋದ್ಯಮ ಜಾಲವನ್ನು ಅಭಿವೃದ್ಧಿಪಡಿಸುವುದು.
• ಕರಾವಳಿ ಸಮಾನಾಂತರ ರಸ್ತೆ ನಿರ್ಮಾಣ: ಮಂಗಳೂರಿನ ತಲಪಾಡಿಯಿಂದ ಉಡುಪಿ ಜಿಲ್ಲೆಯ ಬೈಂದೂರಿ ನವರೆಗೆ ಸಮುದ್ರ ತೀರಕ್ಕೆ ಸಮಾನಾಂತರವಾಗಿ ಸುಸಜ್ಜಿತ ರಸ್ತೆಯನ್ನು ನಿರ್ಮಿಸುವುದು.
• ಪ್ರವಾಸೋದ್ಯಮ ಜಮೀನು ಗುರುತಿಸುವಿಕೆ ಮತ್ತು ಹೋಟೆಲ್ ಉದ್ಯಮ: ಸಮುದ್ರ ತೀರದಲ್ಲಿ ಸುಮಾರು 150 ಎಕರೆ ಜಾಗವನ್ನು ಪ್ರವಾಸೋದ್ಯಮ ವಲಯವೆಂದು ಗುರುತಿಸುವುದು ಹಾಗೂ ಕೇರಳದ ಬೇಕಲ್ ಮಾದರಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಹೋಟೆಲ್ಗಳನ್ನು ಸ್ಥಾಪಿಸಲು ಖಾಸಗಿ ಹೂಡಿಕೆಗೆ ಪ್ರೋತ್ಸಾಹ ನೀಡುವುದು.
• ಅಂತರರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ಮತ್ತು ಪಾರ್ಕ್ಗಳು: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಭೆ-ಸಮಾರಂಭಗಳನ್ನು ಆಯೋಜಿಸಲು ಕನ್ವೆನ್ಷನ್ ಸೆಂಟರ್ ನಿರ್ಮಿಸುವುದು ಮತ್ತು ಸಾರ್ವಜನಿಕರಿಗಾಗಿ ಮಕ್ಕಳ ಪಾರ್ಕ್ಗಳನ್ನು ನಿರ್ಮಿಸುವುದು.
• ಯಕ್ಷಗಾನ, ಕಂಬಳ ಮತ್ತು ಜಾನಪದ ಕಲೆಗಳಿಗೆ ₹10 ಕೋಟಿ ಅನುದಾನ: ಯಕ್ಷಗಾನ, ಬಯಲಾಟ, ಪಾರಂಪರಿಕ ಹಾಗೂ ಆಧುನಿಕ ಕಂಬಳಗಳು ಮತ್ತು ಕೊರಗ, ಮರಾಟಿ ನಾಯ್ಕ, ಕುಡುಬಿ ಸಮುದಾಯಗಳ ಗುಮಟೆ ಕುಣಿತ, ಗೋಂದೋಳು, ಕೋಲಾಟ ಮುಂತಾದ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆಗಾಗಿ ವಾರ್ಷಿಕ ಕನಿಷ್ಠ ₹10 ಕೋಟಿ ವಿಶೇಷ ಅನುದಾನ ಒದಗಿಸುವುದು.
• ದಿ. ಆಸ್ಕರ್ ಫೆರ್ನಾಂಡಿಸ್ ಕಬಡ್ಡಿ ಕ್ರೀಡಾಂಗಣ: ಉಡುಪಿ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರೂಪಿಸಿರುವ ₹7 ಕೋಟಿ ವೆಚ್ಚದ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಂಗಣದ ನಕ್ಷೆ ಹಾಗೂ ಯೋಜನೆಗೆ ಸಂಪುಟದಲ್ಲಿ ಅನುಮೋದನೆ ನೀಡುವುದು.
• ಕರಾವಳಿ ಜಿಲ್ಲೆಗಳ ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕ್ರೀಡಾಪಟುಗಳ ಅನುಕೂಲಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಲ್ಲಿಸಿರುವ ಅಗತ್ಯ ಕಾಮಗಾರಿಗಳ ಪಟ್ಟಿಯಂತೆ ಪ್ರತ್ಯೇಕ ಅನುದಾನ ಮೀಸಲಿಟ್ಟು ಕ್ರೀಡಾ ಸಾಮಗ್ರಿಗಳನ್ನು ಒದಗಿಸುವುದು.
• ಉಡುಪಿಯಲ್ಲಿ ‘ಭಾರತ್ ಜೋಡೋ ಕ್ರೀಡಾ ವಿಶ್ವವಿದ್ಯಾಲಯ’: ಉಡುಪಿ ಜಿಲ್ಲೆಯ ಬೆಳಪು ಗ್ರಾಮದಲ್ಲಿ ಉನ್ನತ ಶಿಕ್ಷಣ ಇಲಾಖೆ, ವಿಟಿಯು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಹಾಗೂ ಸಿಎಸ್ಆರ್ (CSR) ನಿಧಿಯ ನೆರವಿನೊಂದಿಗೆ ನೂತನ ಕ್ರೀಡಾ ವಿಶ್ವವಿದ್ಯಾಲಯವನ್ನು ಆರಂಭಿಸುವುದು.
