ದ.ಕ. ಜಿಲ್ಲೆ: ಇನ್‌ಪ್ಲೂಯೆಂಜಾ (ಎಚ್1ಎನ್1) 87 ಪ್ರಕರಣ ಪತ್ತೆ: ಮಂಗಳೂರಿನಲ್ಲಿ 60 ಪ್ರಕರಣ
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಈ ತಿಂಗಳ 25ರವರೆಗೆ 87 ಇನ್‌ಪ್ಲೂಯೆಂಜಾ (ಎಚ್1ಎನ್1) ಪ್ರಕರಣ ಗಳು ಪತ್ತೆಯಾಗಿದೆ. ಅದರಲ್ಲಿ ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು 60 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಬಂಟ್ವಾಳ 14, ಪುತ್ತೂರು 7, ಬೆಳ್ತಂಗಡಿ 5, ಸುಳ್ಯದಲ್ಲಿ 1 ಪ್ರಕರಣ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಹೇಳಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೈರಸ್‌ಗಳಿಂದ ಸಾಂಕ್ರಾಮಿಕ ಉಸಿರಾಟದ ಕಾಯಿಲೆಯಾಗಿದೆ, ಇನ್‌ಪ್ಲೂಯೆಂಜಾ. ಸಾಮಾನ್ಯವಾಗಿ ಶೀತ ಹವಾಮಾನದಲ್ಲಿ ಅಂದರೆ ಜನವರಿಯಿಂದ ಮಾರ್ಚ್ ಹಾಗೂ ಜುಲೈಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಇದು ಹೆಚ್ಚಾಗಿರುತ್ತದೆ. ಐಎಚ್ ಐಪಿ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ 2025ರಲ್ಲಿ ಜನವರಿಯಿಂದ ಆಗಸ್ಟ್‌ವರೆಗೆ 71 ಪ್ರಕರಣಗಳಿತ್ತು. ಜನವರಿ ಯಿಂದ ಡಿಸೆಂಬರ್ ತನಕ 207 ಪ್ರಕರಣಗಳು ಪತ್ತೆಯಾಗಿತ್ತು. 2024ರಲ್ಲಿ ಈ ಅವಧಿಯಲ್ಲಿ 208 ಪ್ರಕರಣಗಳು ದಾಖಲಾಗಿತ್ತು ಎಂದರು.
ಇನ್‌ಪ್ಲೂಯೆಂಜಾ ಕಾಯಿಲೆ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದ ಡಾ.ತಿಮ್ಮಯ್ಯ ದ.ಕ. ಜಿಲ್ಲೆಯಲ್ಲಿ ಎಚ್1ಎನ್1 ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಅಗತ್ಯ ಔಷಧ ಮತ್ತು ರಕ್ಷಣಾ ಸಾಮಗ್ರಿಗಳ ದಾಸ್ತಾನು ಹೊಂದಿದೆ. ಒಸೆಲ್ಟಾಮಿವಿರ್‌ಕ್ಯಾಪ್ಸೂಲ್ ಐಪಿ 75 ಮಿ.ಗ್ರಾಂ 1,749, 12 ಮಿ.ಗ್ರಾಂ/ಮಿಲಿ ಒರಲ್ ಸಸ್ಪೆನ್‌ಷನ್ 34, ಒಸೆಲ್ಟಾಮಿವಿರ್‌ಕ್ಯಾಪ್ಸೂಲ್ ಐಪಿ 30 ಮಿ.ಗ್ರಾಂ 100 ದಾಸ್ತಾನು ಇದೆ. ಅದಲ್ಲದೆ ಪಿಪಿಇ ಕಿಟ್, ಎನ್ 95 ಮಾಸ್ಕ್‌ಗಳು ಕೂಡ ಬೇಕಾದಷ್ಟು ದಾಸ್ತಾನು ಇರಿಸಲಾಗಿದೆ ಎಂದರು.
ಮಕ್ಕಳು, ಗರ್ಭಿಣಿಯರು, ವಯಸ್ಕರಲ್ಲಿ ಇನ್‌ಪ್ಲೂಯೆಂಜಾ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಶಾಲಾ ಮಕ್ಕಳಲ್ಲಿ ಇದು ಬೇಗನೆ ಹರಡುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ಡಿಡಿಪಿಐ, ಡಿಡಿಪಿಯು ಸಹಿತೆ ಎಲ್ಲಾ ಇಲಾಖೆಯ ಹಾಸ್ಟೆಲ್‌ಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ಇನ್‌ಪ್ಲೂಯೆಂಜಾ ಅಥವಾ ಇತರ ಯಾವುದೇ ಜ್ವರಗಳು ಕಾಣಿಸಿಕೊಂಡಾಗ ಇಂತಹ ಮಕ್ಕಳ ಮಾಹಿತಿ ಆರೋಗ್ಯ ಇಲಾಖೆಗೆ ನೀಡುವಂತೆ ಮತ್ತು ಮಕ್ಕಳನ್ನು ಶಾಲೆಗಳಿಗೆ ಕಳುಹಿಸದಂತೆ ಸೂಚನೆ ನೀಡಲಾಗಿದೆ ಎಂದರು.
