ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಹತಾಶ ಆರೋಪಕ್ಕೆ ರಘುಪತಿ ಭಟ್ ಬೇಷರತ್ ಕ್ಷಮೆ ಯಾಚಿಸಲಿ: ದಿನೇಶ್ ಅಮೀನ್ ಆಗ್ರಹ
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ರಾಜಕೀಯ ಹತಾಶೆಯಿಂದ ಮಾಜಿ ಶಾಸಕ ರಘುಪತಿ ಮಾಡಿರುವ ಆಧಾರ ರಹಿತ ಆರೋಪವನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆ ಯಾಚಿಸುವಂತೆ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್ ಆಗ್ರಹಿಸಿದ್ದಾರೆ.
ಹತಾಶರಾಗಿ ಶಾಸಕರ ವಿರುದ್ಧ ಸುಳ್ಳು ಆರೋಪ
ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಒಡೆತನದ ಖಾಸಗಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಸುಳ್ಳು ಮಾಹಿತಿ ನೀಡಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ಬಗ್ಗೆ ಸ್ಥಳೀಯ ಕರಾವಳಿ ಯುವಕ ಮಂಡಲ ಹಾಗೂ ಊರಿನ ಜನತೆಯ ದೂರಿನಂತೆ ಓರ್ವ ಜವಾಬ್ದಾರಿಯುತ ಶಾಸಕರಾಗಿ ಕಾನೂನು ಪ್ರಕಾರ ಕ್ರಮವಹಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ 3 ಬಾರಿ ಶಾಸಕರಾಗಿರುವ ರಘುಪತಿ ಭಟ್ ರಾಜಕೀಯ ಪ್ರೇರಿತರಾಗಿ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನ ಮಾಡುತ್ತಿದ್ದಾರೆ.
ರಘುಪತಿ ಭಟ್ಟರಿಗೆ ಹಿಂದುಳಿದ ವರ್ಗದ ಸಾಮಾನ್ಯ ಕಾರ್ಯಕರ್ತ ರನ್ನು ಶಾಸಕನಾಗಿ ಒಪ್ಪುವ ಮನಸ್ಥಿತಿ ಇಲ್ಲ
ಹಿಂದೂ ಕಾರ್ಯಕರ್ತನಾಗಿ, ರಾಷ್ಟ್ರೀಯವಾದಿ ಚಿಂತನೆಗಳ ಮೂಲಕ ಹಂತ ಹಂತವಾಗಿ ಬೆಳೆದು, ಉಡುಪಿ ನಗರಸಭೆಯ ಸದಸ್ಯರಾಗಿ, ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಯುವ ಸಹಕಾರಿ ನಾಯಕರಾಗಿ ಮುಖಂಡರಾಗಿ, ಕರಾವಳಿ ಜಿಲ್ಲೆಯ ಮೀನುಗಾರ ಮುಖಂಡರಾಗಿ, ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಓರ್ವ ಹಿಂದುಳಿದ ವರ್ಗಗಳ ಸಾಮಾನ್ಯ ಕಾರ್ಯಕರ್ತ ಪಕ್ಷದ ಹಿರಿಯರ ಸೂಚನೆಯ ಮೇರೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದರೂ ಯಶ್ ಪಾಲ್ ಸುವರ್ಣ ರನ್ನು ಶಾಸಕರಾಗಿ ರಘುಪತಿ ಭಟ್ ಇನ್ನೂ ಒಪ್ಪಿಲ್ಲ.
ಕ್ಷೇತ್ರದ ಜನತೆ ಹಾಗೂ ಪಕ್ಷದ ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಶಾಸಕರು ಎಂದೂ ಮಾಡಿಲ್ಲ
ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಅನುದಾನಗಳ ಕೊರತೆಯ ನಡುವೆಯೂ ಹಗಲಿರುಳು ಶ್ರಮಿಸುತ್ತಾ, ಪಕ್ಷದ ಕಾರ್ಯಕರ್ತರ ಬೇಡಿಕೆ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ರಾಷ್ಟ್ರೀಯತೆ ಹಿಂದುತ್ವದ ವಿಚಾರದಲ್ಲಿ ಎಂದಿಗೂ ರಾಜಿಯಾಗದೇ ಪಕ್ಷದ ಹಿರಿಯರ, ಕಾರ್ಯಕರ್ತರ ಹಾಗೂ ಉಡುಪಿ ಕ್ಷೇತ್ರದ ಜನತೆಯ ಘನತೆಗೆ ಧಕ್ಕೆಯಾಗದಂತೆ ಓರ್ವ ಜವಾಬ್ದಾರಿಯುತ ಶಾಸಕರಾಗಿ ಯಶ್ ಪಾಲ್ ಸುವರ್ಣ ಕಾರ್ಯ ವೈಖರಿ ಬಗ್ಗೆ ಹೆಮ್ಮೆ ಇದೆ.
ಅಧಿಕಾರ ಅನುಭವಿಸಿ ಪಕ್ಷ ದ್ರೋಹ ಮಾಡಿದ ವ್ಯಕ್ತಿಗೆ ಶಾಸಕರನ್ನು ಟೀಕಿಸುವ ನೈತಿಕತೆ ಇಲ್ಲ.
ಬಿಜೆಪಿ ಪಕ್ಷದಿಂದ 3 ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿ, ಕಳೆದ ಚುನಾವಣೆಯಲ್ಲಿ ಸೀಟು ನೀಡಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಅಧಿಕಾರದ ಲಾಲಸೆಯಿಂದ ತನಗಾಗಿ ಹಗಲಿರುಳು ದುಡಿದ ಕಾರ್ಯಕರ್ತರನ್ನು ನಡು ನೀರಲ್ಲಿ ಕೈಬಿಟ್ಟು, ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದು ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಪಕ್ಷದ ಹಿರಿಯರ ಮನವಿಗೂ , ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯರಿಗೂ ಗೌರವ ನೀಡದ ರಘುಪತಿ ಭಟ್ ರಿಗೆ ಶಾಸಕರ ಕಾರ್ಯವೈಖರಿ, ಪಕ್ಷ ನಿಷ್ಠೆ ಹಾಗೂ ಬದ್ಧತೆಯ ಬಗ್ಗೆ ಟೀಕಿಸುವ ನೈತಿಕತೆ ಉಳಿದಿಲ್ಲ.
3 ಬಾರಿ ಶಾಸಕರಾಗಿರುವವರಿಗೆ ಕಾನೂನು ಮಾರ್ಗದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಕನಿಷ್ಠ ಜ್ಞಾನ ಇಲ್ಲವೇ?
ಒಂದು ವೇಳೆ ರಘುಪತಿ ಭಟ್ ರವರ ನಿಯಮ ಬದ್ಧವಾಗಿರುವ ಕಡತಗಳಿಗೆ ದುರುದ್ದೇಶ ಪೂರ್ವಕವಾಗಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮ ಕಡತಗಳ ಬಗ್ಗೆ ಅಧಿಕಾರಿಗಳಿಂದ ತೊಂದರೆ ನೀಡುವ ಉದ್ದೇಶದಿಂದ ವಿಳಂಬ ಮಾಡುತ್ತಿದ್ದಾರೆ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡಬಹುದು ಅಥವಾ ಉನ್ನತ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದರೂ ಈ ಬಗ್ಗೆ ಕನಿಷ್ಟ ಜ್ಞಾನ ಇಲ್ಲದಂತೆ ವರ್ತಿಸಿ ಸಮಾಜದ ಮುಂದೆ “ಸಂತ್ರಸ್ತ” ಎಂಬಂತೆ ಬಿಂಬಿಸಲು ಹೊರಟಿದ್ದಾರೆ.
ಶಾಸಕರನ್ನು ರೌಡಿಯ ರೀತಿಯಲ್ಲಿ ಬಿಂಬಿಸುವ ವಿಫಲ ಯತ್ನ
ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ನಿರಂತರವಾಗಿ ತೇಜೋವಧೆಗೆ ಮುಂದಾಗುತ್ತಿರುವ ರಘುಪತಿ ಭಟ್, ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕರು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಒತ್ತಡ ಹಾಕುತ್ತಿದ್ದಾರೆ ಎಂಬ ಬಾಲಿಶ ಅಧಾರ ರಹಿತ ಆರೋಪ ಮಾಡಿ ಸಮಾಜದ ಮುಂದೆ ಶಾಸಕರನ್ನು ರೌಡಿಯ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಅಧಿಕಾರಕಾರಿಗಳಿಗೆ ಶಾಸಕರು ಬೆದರಿಕೆ ಹಾಕಿದ ಬಗ್ಗೆ ದಾಖಲೆ ನೀಡಲಿ
ರಘುಪತಿ ಭಟ್ಟರಿಗೆ ನೈತಿಕತೆ ಇದ್ದರೆ ಇಂತಹ ಸುಳ್ಳು ಆರೋಪ ಮಾಡುವ ಬದಲು ಶಾಸಕರು ಅಧಿಕಾರಿಗಳಿಗೆ ಬೆದರಿಕೆ ಮಾಡಿದ ಬಗ್ಗೆ ಯಾವುದೇ ಸೂಕ್ತ ದಾಖಲೆಗಳಿದ್ದರೆ ಬಹಿರಂಗ ಪಡಿಸಬೇಕು ಹೊರತು ಅರ್ಧ ಗೋಡೆಯಲ್ಲಿ ದೀಪ ಇಟ್ಟಂತೆ ಗಾಳಿಯಲ್ಲಿ ಗುಂಡು ಹೊಡೆಯ ಬಾರದು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದು ಮಾಜಿ ಶಾಸಕರು ಮರೆತಿದ್ದಾರೆ.
ತನ್ನ ಖಾಸಗಿ ಜಮೀನಿನ ಕಡತಗಳ ಬಗ್ಗೆ ಸದಾ ಶಾಸಕರ ಬಗ್ಗೆ ಗೂಬೆ ಕೂರಿಸುವ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕರೇ ಇದ್ದಾರೆಂಬುದನ್ನು ಮರೆತಂತಿದೆ.
ಶಾಸಕರು ಕಾಂಗ್ರೆಸ್ ಸಚಿವರಿಗಿಂತಲೂ ಪ್ರಭಾವಿಯೇ?
ರಘುಪತಿ ಭಟ್ ಪ್ರಕಾರ ಶಾಸಕ ಯಶ್ ಪಾಲ್ ಸುವರ್ಣ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರಿಗಿಂತಲೂ ಹೆಚ್ಚು ಪ್ರಭಾವಿ ನಾಯಕರಾಗಿದ್ದಾರೆ ಎಂದು ಹೇಳಿದಂತಾಗಿದೆ.
ರಘುಪತಿ ಭಟ್ ಹತಾಶ ಮನಸ್ಥಿತಿ ಬಯಲಾಗಿದೆ
ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ
ರಘುಪತಿ ಭಟ್ ಸುಳ್ಳು ಆರೋಪಗಳ ಮೂಲಕ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ತೇಜೋವಧೆ ಮಾಡುತ್ತಿರುವ ಈ ಹತಾಶ ಮನಸ್ಥಿತಿಯನ್ನು ತಕ್ಷಣ ಕೈಬಿಟ್ಟು ಕ್ಷಮೆ ಯಾಚಿಸಬೇಕು.
ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅವಮಾನ
ಉಡುಪಿ ಜನತೆಯ ಪ್ರತಿನಿಧಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಶಾಸಕರಾದ ಯಶ್ ಪಾಲ್ ಸುವರ್ಣ ರನ್ನು ಟೀಕಿಸುವ ಭರದಲ್ಲಿ ರಘುಪತಿ ಭಟ್ ರವರು ಪರೋಕ್ಷವಾಗಿ ಬಿಜೆಪಿ ಕಾರ್ಯಕರ್ತರನ್ನೇ ಅವಮಾನಿಸಲು ಹೊರಟಿದ್ದು, ಯಶ್ ಪಾಲ್ ಸುವರ್ಣ ರನ್ನು ಗೆಲ್ಲಿಸಿದ ಬಿಜೆಪಿ ಕಾರ್ಯಕರ್ತರೇ ಈ ಹಿಂದೆ ರಘುಪತಿ ಭಟ್ ರನ್ನು 3 ಬಾರಿ ಗೆಲ್ಲಿಸಿದ್ದರು ಎಂಬುದನ್ನು ಮರೆಯಬಾರದು.
ಕಳೆದ ಚುನಾವಣೆಯಲ್ಲಿ ಯಶ್ ಪಾಲ್ ಸುವರ್ಣ ಗೆಲುವಿಗೆ ರಘುಪತಿ ಭಟ್ ದುಡಿದಿದ್ದರೆ, ರಘುಪತಿ ಭಟ್ ರವರ ಹಿಂದಿನ ಚುನಾವಣೆಯಲ್ಲಿ ಯಶ್ ಪಾಲ್ ಸುವರ್ಣ ಕೂಡ ಓರ್ವ ಕಾರ್ಯಕರ್ತರಾಗಿ ಶ್ರಮ ಪಟ್ಟಿದ್ದಾರೆ.
ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ರಘುಪತಿ ಭಟ್ ರವರ ತಮ್ಮ ವೈಯುಕ್ತಿಕ ಸ್ವಯಂಕೃತ ಸಮಸ್ಯೆಗಳ ಸಂದರ್ಭದಲ್ಲಿಯೂ ತಮ್ಮ ಗೌರವಕ್ಕೆ ಧಕ್ಕೆ ಬಂದಿದ್ದರೂ ಅವರ ಗೆಲುವಿಗೆ ತಾವೇ ಅಭ್ಯರ್ಥಿ ಎಂಬಂತೆ ದುಡಿದಿದ್ದಾರೆ ಎಂಬುದನ್ನು ರಘುಪತಿ ಭಟ್ ಮರೆಯಬಾರದು.
ನಿರಂತರ ತೇಜೋವಧೆಗೆ ತಕ್ಕ ಉತ್ತರ ಬಿಜೆಪಿ ನೀಡಲು ಬದ್ಧ
ತಕ್ಕ ಉತ್ತರ ನೀಡಲು ಬಿಜೆಪಿ ಬದ್ಧ
ಮುಂದಿನ ದಿನಗಳಲ್ಲಿ ರಘುಪತಿ ಭಟ್ ಶಾಸಕರ ವಿರುದ್ಧ ಹತಾಶ ಆರೋಪಗಳನ್ನು ಮಾಡುವ ಚಾಳಿಯನ್ನು ತಕ್ಷಣ ಕೈಬಿಡಬೇಕು ತಪ್ಪಿದಲ್ಲಿ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜು ಕುಲಾಲ್, ಜಗದೀಶ್ ಆಚಾರ್ಯ, ಪ್ರದೀಪ್ ಹೊನ್ನಾಳ, ಶ್ರೀವತ್ಸ, ಮನೋಜ್ ಶೆಟ್ಟಿ ಉಪಸ್ಥಿತರಿದ್ದರು.
