ಇನ್ನು ಮುಡಾದಿಂದಲೇ ಭೂಪರಿವರ್ತನೆ ನೇರ ಅನುಮೋದನೆ: ಸಂತೋಷ್ ಕುಮಾರ್ ಶೆಟ್ಟಿ
ಮಂಗಳೂರು: ಅನುಮೋದಿತ ಮಹಾಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ಕಚೇರಿಯಿಂದ ಪ್ರತ್ಯೇಕವಾಗಿ ಪಡೆಯಬೇಕಾಗಿದ್ದ ಭೂ ಪರಿವರ್ತನಾ ಆದೇಶವನ್ನು ರದ್ದುಪಡಿಸಿ ನೇರವಾಗಿ ಮುಡಾದಿಂದಲೇ ಅನುಮೋದನೆಗೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಅನಧಿಕೃತ ಕಟ್ಟಡ ವಿನ್ಯಾಸಗಳ ಮೇಲಿನ ದಂಡವನ್ನು ಶೇ.15ರಿಂದ ಶೇ.1ಕ್ಕೆ ಇಳಿಕೆ ಮಾಡಲಾಗಿದೆ. ಸರಕಾರದಿಂದ ಇದೊಂದು ಐತಿಹಾಸಿಕ ತೀರ್ಮಾನವಾಗಿದ್ದು, ಸಾರ್ವಜನಿಕರಿಗೆ ಸಮಯ, ಶ್ರಮ ಹಾಗೂ ಅಪಾರ ಪ್ರಮಾಣದ ಹಣ ಉಳಿತಾಯವಾಗಲಿದೆ ಎಂದು ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಮುಡಾ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಸರಕಾರ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದ್ದು, ಮುಡಾದ ಅನುಮೋದಿತ ಮಹಾಯೋಜನೆ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ಕಚೇರಿಯಿಂದ ಪ್ರತ್ಯೇಕವಾಗಿ ಪಡೆಯಬೇಕಾದ ಭೂ ಪರಿವರ್ತನಾ ಆದೇಶವನ್ನು ಸಂಪೂರ್ಣವಾಗಿ ತೆಗೆದುಹಾಕಿದೆ ಎಂದರು.
ಮಹಾ ಯೋಜನೆಯಲ್ಲಿ ನಿರ್ದಿಷ್ಟ ಜಮೀನು ಯಾವ ವಲಯಕ್ಕೆ ಒಳಪಟ್ಟಿದೆಯೋ ಅದೇ ವಲಯದ ಪ್ರಕಾರ ನೇರವಾಗಿ ಮಂಗಳೂರು ನಗರಾಭಿವೃದ್ಧಿ ಪಾಧಿಕಾರದಿಂದಲೇ ಏಕ ನಿವೇಶನ ಅಥವಾ ವಿನ್ಯಾಸ ಅನುಮೋದನೆ ನೀಡಲು ಸರಕಾರ ಅಧಿಕಾರ ನೀಡಿದೆ. ಹಿಂದೆ ಸಾರ್ವಜನಿಕರು ಕೃಷಿ ಜಮೀನನ್ನು ಪರಿವರ್ತಿಸಲು ಮೊದಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ, ತಿಂಗಳುಗಟ್ಟಲೆ ಕಾದು, ಆದೇಶ ಪಡೆದ ಬಳಿಕವೇ ಮುಡಾಕ್ಕೆ ಅರ್ಜಿ ಸಲ್ಲಿಸಬೇಕಿತ್ತು. ಈ ದ್ವಿಮುಖ ಪ್ರಕ್ರಿಯೆ ಈಗ ಸಂಪೂರ್ಣ ರದ್ದಾಗಿದೆ. ಕಂದಾಯ ಮತ್ತು ನಗರಾಭಿವೃದ್ಧಿ ಕಚೇರಿಗಳ ನಡುವೆ ಸಾರ್ವಜನಿಕರು ಸಲ್ಲಿಸಬೇಕಿದ್ದ ಅನಗತ್ಯ ದಾಖಲೆಗಳು ಕಡಿಮೆಯಾಗಿದ್ದು, ಏಕಗವಾಕ್ಷಿ ರೀತಿಯಲ್ಲಿ ನೇರ ವಿನ್ಯಾಸ ಮಂಜೂರಾತಿ ದೊರೆಯಲಿದೆ ಎಂದರು.
ಪ್ರಾಧಿಕಾರದ ವಲಯ ನಿಯಮಾವಳಿ ಅಂಶ 29.6.2ರ ಅನ್ವಯ ಇದ್ದ ನಿಯಮಗಳನ್ನು ಜನಸ್ನೇಹಿಗೊಳಿಸಿ ಸರಾಕರ ನೂತನ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ ಈ ಹಿಂದೆ ಇದ್ದ ಕಠಿಣ ಷರತ್ತುಗಳನ್ನು ಸಡಿಲಿಸಿದೆ.
2011ರ ಮಾರ್ಚ್ 26ರ ಮುಂಚಿತವಾಗಿ ನೋಂದಣಿಯಾದ ಅನಧಿಕೃತ ವಿಭಜಿತ ಜಮೀನುಗಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶೇ. 15ರಷ್ಟು ಭಾರೀ ದಂಡ ಶುಲ್ಕವನ್ನು ಶೇ. 1ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ಉಳಿತಾಯವಾಗಲಿದೆ. 2021ರ ಮಾರ್ಚ್ 26ರ ನಂತರ ನೋಂದಣಿಯಾದ ಅನಧಿಕೃತ ವಿಭಜಿತ ಪ್ರಕರಣಗಳಿಗೆ ಈ ಹಿಂದೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅರಿವಿಲ್ಲದೆ ಜಮೀನು ಖರೀದಿಸಿ ಅತಂತ್ರರಾಗಿದ್ದ ಬಡ ಹಾಗೂ ಮಧ್ಯಮ ವರ್ಗದ ನಾಗರಿಕರ ನೆರವಿಗೆ ಮುಂದಾಗಿರುವ ಸರಕಾರ ಅಂತಹ ಪ್ರಕರಣಗಳಿಗೂ ಶೇ. 1ರಷ್ಟು ಶುಲ್ಕದೊಂದಿಗೆ ಅಧಿಕೃತ ವಿನ್ಯಾಸ ಅನುಮೋದನೆ ನೀಡಲು ಅನುಮತಿ ನೀಡಿದೆ ಎಂದು ಅವರು ವಿವರ ನೀಡಿದರು.
ಈ ನಿರ್ಧಾರದಿಂದ ವರ್ಷಗಳಿಂದ ಅನುಮೋದನೆ ಸಿಗದೆ ಬಾಕಿ ಉಳಿದಿದ್ದ ಸಾವಿರಾರು ಆಸ್ತಿಗಳಿಗೆ ಅಧಿಕೃತ ಮಾನ್ಯತೆ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಹಕ್ಕು ದಾಖಲೆ ಪಡೆಯಲು ದಾರಿ ಸುಗಮವಾಗಿದೆ ಎಂದು ಅವರು ತಿಳಿಸಿದರು.
ಕುಂಜತ್ತಬೈಲ್ನಲ್ಲಿ 208 ನಿವೇಶನಗಳ ಬಡಾವಣೆ: ಉಳಿಕೆ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಕುಂಜತ್ತಬೈಲ್, ಚೇಳ್ಯಾರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಸತಿ ಬಡಾವಣೆ, ಕೆರೆಗಳ ಅಭಿವೃದ್ಧಿ, ಉದ್ಯಾನವನ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕುಂಜತ್ತಬೈಲ್ನಲ್ಲಿ 17 ಎಕರೆ 49 ಸೆಂಟ್ಸ್ ಜಮೀನಿನಲ್ಲಿ ₹8.75 ಕೋಟಿ ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದ್ದು, ಇಲ್ಲಿ ಒಟ್ಟು 208 ನಿವೇಶನಗಳಿವೆ. ಈಗಾಗಲೇ 32 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದ ನಿವೇಶನಗಳ ಹಂಚಿಕೆಗಾಗಿ ಪ್ರಕಟಣೆ ಹೊರಡಿಸಲಾಗಿದ್ದು, ಆಸಕ್ತರು ಡಿಸೆಂಬರ್ 28, 2026ರೊಳಗೆ ನಿವೇಶನದ ಮೊತ್ತದ ಶೇ. 10ರಷ್ಟು ಹಣ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಚೇಳ್ಯಾರ್ ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿ ಮೊದಲ ಹಂತದಲ್ಲಿ 45 ಎಕರೆ 85 ಸೆಂಟ್ಸ್ ಜಮೀನಿನಲ್ಲಿ ವಸತಿ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಒಟ್ಟು 709 ನಿವೇಶನಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಿದ್ದು, ₹15.98 ಕೋಟಿ ವೆಚ್ಚದ ಸಿವಿಲ್ ಕಾಮಗಾರಿಗೆ ಗುತ್ತಿಗೆ ನಿಗದಿಪಡಿಸಲಾಗಿದೆ. ಸದ್ಯ ಕಾಮಗಾರಿ ಪ್ರಗತಿಯಲ್ಲಿದೆ.
ಇದರೊಂದಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿವಿಧ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಸರ್ಕಾರಿ ಕೆರೆ ಅಭಿವೃದ್ಧಿಗೆ ₹2 ಕೋಟಿ, ಮುಳ್ಳಿಯ ಆಣೆಕಟ್ಟಿನ ಕೆರೆ ಅಭಿವೃದ್ಧಿಗೆ ₹4.95 ಕೋಟಿ ಹಾಗೂ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಮೂರುಕಟ್ಟೆ ಕೆರೆ ಅಭಿವೃದ್ಧಿಗೆ ₹4.95 ಕೋಟಿ ಮೀಸಲಿಡಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ವಾರ್ಡ್ನ 69/2ನೇ ಸರ್ವೆ ನಂಬರ್ನಲ್ಲಿರುವ ಕೆರೆ ಅಭಿವೃದ್ಧಿಗೆ ₹1.05 ಕೋಟಿ ಹಾಗೂ ಹೊಸಬೆಟ್ಟು ಗ್ರಾಮದ ಕೋಡಿ ಕೆರೆ ಅಭಿವೃದ್ಧಿಗೆ ₹1.35 ಕೋಟಿ ನಿಗದಿಪಡಿಸಲಾಗಿದೆ. ಅಂಬ್ಲಿಮೊಗರು ಗ್ರಾಮದ ಕೆರೆ ಅಭಿವೃದ್ಧಿಗೆ ₹1 ಕೋಟಿ, ಜಪ್ಪಿನಮೊಗರು ಸರ್ವೆ ನಂಬರ್ 59/9ರಲ್ಲಿರುವ ಕೆರೆ ಅಭಿವೃದ್ಧಿಗೆ ₹50 ಲಕ್ಷ, ತಲಪಾಡಿ ದೇವಿಪುರ ದೇವಸ್ಥಾನದ ಕೆರೆ ಅಭಿವೃದ್ಧಿಗೆ ₹15 ಲಕ್ಷ ಹಾಗೂ ಹೊಸಬೆಟ್ಟು ಗ್ರಾಮದ ತಾವರೆಕೊಳದ ಸರ್ಕಾರಿ ಜಮೀನಿನಲ್ಲಿರುವ ಕೆರೆ ಅಭಿವೃದ್ಧಿಗೆ ₹2.06 ಕೋಟಿ ಮೀಸಲಿಡಲಾಗಿದೆ. ಈ ಒಂಬತ್ತು ಕೆರೆಗಳ ಅಭಿವೃದ್ಧಿಗೆ ಒಟ್ಟು ₹18.01 ಕೋಟಿ ವೆಚ್ಚ ಅಂದಾಜಿಸಲಾಗಿದೆ.
ನಗರದ ಉದ್ಯಾನವನಗಳ ಅಭಿವೃದ್ಧಿಗೂ ಪ್ರಾಧಿಕಾರ ಯೋಜನೆ ರೂಪಿಸಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸಬೆಟ್ಟು ವಾರ್ಡ್ ನಂ. 8ರ ಪ್ರೇಮ್ನಗರದಲ್ಲಿರುವ ಸಾರ್ವಜನಿಕ ಉದ್ಯಾನವನ ಹಾಗೂ ಹರೇಕಳ ಡ್ಯಾಂ ಸಮೀಪ ಉದ್ಯಾನವನ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಇದಲ್ಲದೆ, ಮಂಗಳೂರಿನ ಲೇಡಿಹಿಲ್ನಿಂದ ಕೊಟ್ಟಾರ ಜಂಕ್ಷನ್ವರೆಗಿನ ರಸ್ತೆಯನ್ನು ₹3 ಕೋಟಿ ಅಂದಾಜು ವೆಚ್ಚದಲ್ಲಿ ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಯೋಜನಾ ವರದಿ ಸಿದ್ಧಪಡಿಸುವ ಹಂತದಲ್ಲಿದೆ. ಮಂಗಳೂರು ತಾಲೂಕು ದೇರೆಬೈಲ್ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ವಿವಿಧ ಸರ್ವೆ ನಂಬರ್ಗಳಲ್ಲಿರುವ 88 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ ಮಾರ್ಕೆಟ್ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆಯೂ ವರದಿ ಸಿದ್ಧಪಡಿಸುವ ಹಂತದಲ್ಲಿದೆ.
