ನಿಮ್ಮ ಬಣ ರಾಜಕೀಯಕ್ಕೆ ಜಿಲ್ಲಾಧಿಕಾರಿಗಳನ್ನು ಬಲಿಪಶು ಮಾಡಬೇಡಿ: ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ
ಉಡುಪಿ: ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ತನಕ ಒಂದಾಗಿದ್ದ ಮನಸ್ಸುಗಳು, ಪರ್ಯಾಯ ಮುಗಿದ ತಕ್ಷಣವೇ ಒಣ ಬಣ ರಾಜಕೀಯಕ್ಕೆ ತಿರುಗಿರುವುದು ದುರದೃಷ್ಟಕರ ಎಂದು ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಟೀಕಿಸಿದ್ದಾರೆ.
ಪರ್ಯಾಯ ಮಹೋತ್ಸವವನ್ನು ಸರ್ವ ಹಿಂದೂಗಳು ಒಂದಾಗಿ ಆಚರಿಸುವ ಸಂದರ್ಭದಲ್ಲಿ, ಅಷ್ಟಮಠದ ಯತಿಗಳ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆ ಜಿಲ್ಲಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಡುಪಿ ಶಾಸಕರು ವೇದಿಕೆಗೆ ಬಂದು ಹಿಂದೂ ಧ್ವಜವನ್ನು ಜಿಲ್ಲಾಧಿಕಾರಿಗಳ ಕೈಗೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರೇ ಜಿಲ್ಲಾಧಿಕಾರಿಯಾಗಿದ್ದರೂ ಅದನ್ನು ನಿರಾಕರಿಸುವುದು ಸಾಧ್ಯವಿಲ್ಲ, ಹಾಗೆಯೇ ಅದು ಅಸಾಧುವೂ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಗಳ ಧಾರ್ಮಿಕ ಉತ್ಸವದಲ್ಲಿ ಹಿಂದೂ ಧ್ವಜ ಹಿಡಿದು ಉದ್ಘಾಟನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಅದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಇದ್ದಿದ್ದರೂ ಅವರು ಸಹ ಇದೇ ರೀತಿಯಲ್ಲಿ ನಡೆದುಕೊಂಡಿರುತ್ತಿದ್ದರು. ಇದನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ಯಾವ ರೀತಿಯಲ್ಲಿ ಪರಿಗಣಿಸುತ್ತಿತ್ತೋ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಹಿಂದೂ ಧಾರ್ಮಿಕತೆ ಹಾಗೂ ಭಗವಾ ಧ್ವಜದ ವಿರುದ್ಧ ಇಷ್ಟು ಸಂಕುಚಿತ ಮನೋಭಾವ ತೋರಿಸುತ್ತಾ, ಜಾತ್ಯತೀತ ಸಂವಿಧಾನದ ಸಿದ್ಧಾಂತದ ಬಗ್ಗೆ ಮಾತನಾಡುವವರು ನಿಜವಾದ ಜಾತ್ಯತೀತವಾದಿಗಳಾಗಿದ್ದರೆ, ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ರಾಜಕೀಯ ಪ್ರೇರಿತ ಸಚಿವ ಸಂಪುಟದ ವ್ಯಾಪ್ತಿಯಿಂದ ಹೊರಗಿಡಬೇಕಾಗಿತ್ತು. ಧಾರ್ಮಿಕ ದತ್ತಿ ಇಲಾಖೆ, ಅದಕ್ಕೆ ಸಂಬಂಧಿಸಿದ ಆಡಳಿತ ವ್ಯವಸ್ಥೆಗಳು ಜಾತ್ಯತೀತತೆಯ ಹೆಸರಿನಲ್ಲಿ ಯಾಕೆ ಅಗತ್ಯವೆಂಬುದನ್ನು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದರು.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಈ ನಿಲುವು ಮುಂದಿನ ದಿನಗಳಲ್ಲಿ ಅವರಿಗೆ ಮುಳುವಾಗಬಹುದು. ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳನ್ನು ಅನಗತ್ಯ ರಾಜಕೀಯ ವಿವಾದಕ್ಕೆ ಎಳೆದು ಬಲಿಪಶು ಮಾಡುವುದು ಸರಿಯಲ್ಲ. ಇಲ್ಲಿ ಹಾರಿಸಲಾದದ್ದು ಪ್ರತಿಯೊಂದು ಹಿಂದೂ ದೇವಾಲಯದಲ್ಲೂ ಹಾರುವ ಪವಿತ್ರ ಭಗವಾ ಧ್ವಜವೇ ಹೊರತು ಯಾವುದೇ ರಾಷ್ಟ್ರವಿರೋಧಿ ಧ್ವಜವಲ್ಲ ಎಂದು ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ.
