ಕದಳೀ ವಿಶ್ವದರ್ಶನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ
162 ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆ
ಉಡುಪಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಲ್ಲಿರುವ ಕಲಾಪ್ರತಿಭೆ ಹಾಗೂ ಸೃಜನಶೀಲ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ, ಅವರನ್ನು ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳದ ಭಾಗೀದಾರರನ್ನಾಗಿಸುವ ಉದ್ದೇಶದಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬಾಳೆ ಕೃಷಿ ಹಾಗೂ ಬಾಳೆಯ ಮಹತ್ವವನ್ನು ಆಧರಿಸಿದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯು ದಿನಾಂಕ 22 ನವೆಂಬರ್ 2026ರ ಭಾನುವಾರದಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿಯ ಬೀಡಿನಗುಡ್ಡೆ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಸಭಾಂಗಣದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ಒಟ್ಟು 162 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸೋದೆ ಶ್ರೀ ವಾದಿರಾಜ ಮಠದ ದಿವಾನರಾದ ಶ್ರೀ ಪಾಡಿಗಾರು ಶ್ರೀನಿವಾಸ ತಂತ್ರಿಗಳು ಪ್ರಶಂಸನಾ ಪತ್ರ ಹಾಗೂ ಶ್ರೀ ದೇವರ ಪ್ರಸಾದವನ್ನು ನೀಡಿ ಹರಸಿದರು.ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಶ್ರೀ ಗಂಗಾಧರ ರಾವ್, ಕಾರ್ಯದರ್ಶಿಗಳಾದ ಶ್ರೀ ಮುರಳಿ ಕಡೆಕಾರ್, ಕಲಾರಂಗದ ಸದಸ್ಯರು ಹಾಗೂ ಸೋದೆ ಶ್ರೀ ವಾದಿರಾಜ ಮಠದ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಮೂಡಿಬಂದ ಚಿತ್ರಕೃತಿಗಳ ಪೈಕಿ ಅತ್ಯುತ್ತಮ ಐದು ಚಿತ್ರಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಚಿತ್ರಗಳ ವಿದ್ಯಾರ್ಥಿ ಕಲಾವಿದರಿಗೆ ಡಿಸೆಂಬರ್ 1ರಂದು ಸಂಜೆ ನಡೆಯಲಿರುವ ‘ಕದಳೀ ವಿಶ್ವದರ್ಶನ’ ಬಾಳೆ ಮೇಳದ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು.
ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಕೃಷಿಯ ಕುರಿತ ಆಸಕ್ತಿ ಹಾಗೂ ಸೃಜನಶೀಲ ಅಭಿವ್ಯಕ್ತಿಯನ್ನು ಬೆಳೆಸುವ ಈ ಪ್ರಯತ್ನವು ಕದಳೀ ವಿಶ್ವದರ್ಶನದ ಸಾಮಾಜಿಕ ಮತ್ತು ಶೈಕ್ಷಣಿಕ ಆಶಯಗಳಿಗೆ ಮತ್ತೊಂದು ಅರ್ಥಪೂರ್ಣ ಸೇರ್ಪಡೆಯಾಗಿದೆ.
