ಭಾರೀ ಮಳೆ ಹಿನ್ನೆಲೆ: ನಾಳೆ (ಆ.4) ದಕ ಜಿಲ್ಲೆಯ ವಿವಿಧ ತಾಲೂಕುಗಳ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು: ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ನೀಡಿರುವ ಹವಾಮಾನ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಆಗಸ್ಟ್ 4, 2026ರಂದು ಜಿಲ್ಲೆಯ ವಿವಿಧ ತಾಲೂಕುಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.
ಮಂಗಳೂರು ಉಪವಿಭಾಗದ ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ಹಾಗೂ ಉಳ್ಳಾಲ ತಾಲೂಕುಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು (10ನೇ ತರಗತಿಯವರೆಗೆ) ಹಾಗೂ ಎಲ್ಲಾ ವಸತಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇದೇ ವೇಳೆ ಪುತ್ತೂರು ಉಪವಿಭಾಗದ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕುಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು (12ನೇ ತರಗತಿಯವರೆಗೆ), ಎಲ್ಲಾ ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳು ಮತ್ತು ಎಲ್ಲಾ ವಸತಿ ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸುವ ಸಂಸ್ಥೆಗಳು ಅಥವಾ ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
