ಇ.ಡಿ, ಐಟಿ, ಸಿಬಿಐ ಬಿಜೆಪಿಯ ಯುವಮೋರ್ಚಾ, ಎಬಿವಿಪಿ ಇದ್ದಂತೆ : ಸಚಿವ ರಿಜ್ವಾನ್ ಅರ್ಷದ್
ಉಡುಪಿ: ‘ಜಾರಿ ನಿರ್ದೇಶನಾಲಯ (ಇ.ಡಿ.), ಆದಾಯ ತೆರಿಗೆ (ಐ.ಟಿ) ಇಲಾಖೆ ಮತ್ತು ಸಿಬಿಐ, ಬಿಜೆಪಿಯ ಯುವಮೋರ್ಚಾ, ಎಬಿವಿಪಿ ಇದ್ದಂತೆ. ಅವು ದಾಳಿ ನಡೆಸುತ್ತಲೇ ಇರುತ್ತವೆ’ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಇ.ಡಿ. ಪರಿಶೋಧನೆ ನಡೆದಿರುವ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಬುಧವಾರ ಇಲ್ಲಿ ಮಾತನಾಡಿದ ಅವರು, ‘ಯಾರನ್ನು ಒತ್ತಡದಲ್ಲಿ ಸಿಲುಕಿಸಬೇಕು, ಯಾರನ್ನು ದುರ್ಬಲಗೊಳಿಸಬೇಕು ಅಥವಾ ಬಿಜೆಪಿಯನ್ನು ಗೆಲ್ಲಿಸಬೇಕು ಎಂಬ ಯೋಜನೆ ಹಾಕಿಕೊಂಡು ಈ ಮೂರೂ ಸಂಸ್ಥೆಗಳು ಕೆಲಸ ಮಾಡುತ್ತಿವೆ’ ಎಂದರು.
ಬಿಜೆಪಿ ಕೈಗೊಂಡಿರುವ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಅವರನ್ನು ತೆಗೆದುಹಾಕಲು ತೀರ್ಮಾನವಾದಂತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೂಡ ಆ ವಿಚಾರವನ್ನು ಹೇಳಿದ್ದಾರೆ. ಹಾಗಾಗಿ ಕುರ್ಚಿ ಬಚಾವ್ ಮಾಡಿಕೊಳ್ಳಲು ವಿಜಯೇಂದ್ರ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.
ಬರಗಾಲ ಇದೆ, ರೈತರಿಗೆ ಸಮಸ್ಯೆ ಇದೆ. ನಾವೆಲ್ಲ ಸೇರಿ ಅದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಜನ ನಮ್ಮನ್ನು ಐದು ವರ್ಷಕ್ಕಾಗಿ ಗೆಲ್ಲಿಸಿದ್ದಾರೆ. ಐದು ವರ್ಷ ಪೂರ್ಣಗೊಂಡ ಬಳಿಕ ಚುನಾವಣೆಗೆ ಬರ್ತೇವೆ. ಯಾರು ಇರ್ತಾರೆ, ಯಾರು ಮುಳುಗಿ ಹೋಗ್ತಾರೆ ಎಂಬುದನ್ನು ಜನ ತೀರ್ಮಾನ ಮಾಡ್ತಾರೆ’ ಎಂದರು.
