ಪಶು ವೈದ್ಯಕೀಯ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ಪ್ರಯತ್ನ : ಸಚಿವ ವೆಂಕಟೇಶ್
ಮಂಗಳೂರು: ಕಡಬ ತಾಲೂಕು ಕೊೈಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಶುಸಂಗೋಪನೆ ಮತ್ತು ರೇಶ್ಮೆ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ.
ಅವರು ಮಂಗಳವಾರ ಕೊೈಲ ಪಶುವೈದ್ಯಕೀಯ ಕಾಲೇಜು ಹಾಗೂ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಕೊೈಲ ಪಶುವೈದ್ಯಕೀಯ ಕಾಲೇಜು ಕಟ್ಟಡಕ್ಕೆ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದೆ. ಕಾಲೇಜಿಗೆ ಅಗತ್ಯವಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮಂಜೂರುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ವರ್ಷದ ತರಗತಿಗಳನ್ನು ಪ್ರಾರಂಭಿಸಲು ಗಂಭೀರವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕಾಲೇಜು, ಹಾಸ್ಟೆಲ್ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಈಗಾಗಲೇ ಪೂರ್ಣಗೊಂಡಿದೆ. 13 ಉಪನ್ಯಾಸಕರ ಹುದ್ದೆ, 32 ಇತರೆ ಸಿಬ್ಬಂದಿ ಹುದ್ದೆಗಳು ಮಂಜೂರುಗೊಳಿಸಲಾಗಿದೆ. ಕಾಲೇಜಿಗೆ ಭಾರತೀಯ ಪಶುವೈದ್ಯಕೀಯ ಪರಿಷತ್ (ವಿ.ಸಿ.ಐ) ಅನುಮತಿ ದೊರಕುವುದು ಬಾಕಿ ಇದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದಲ್ಲಿ ಅಪರೂಪದ ಜಾನುವಾರು ತಳಿಗಳನ್ನು ಬೆಳೆಸಲು ಹೆಚ್ಚು ಆದ್ಯತೆ ನೀಡಬೇಕು. ಜಾನುವಾರು ಮತ್ತು ಕುಕ್ಕುಟಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಹೆಚ್ಚಿಸಬೇಕು. ಹೊಸ ಹೊಸ ತಳಿಗಳನ್ನು ಪರಿಚಯಿಸಬೇಕು ಎಂದು ಸಚಿವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರು ಸಾಕಾಣಿಕೆ ಸಂಖ್ಯೆಯು ಕುಸಿಯುತ್ತಿರುವುದರಿಂದ ಹೈನುಗಾರಿಕೆಯನ್ನು ಪೆÇ್ರೀತ್ಸಾಹಿಸಲು ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧೆಡೆ ಮಂಜೂರುಗೊಂಡಿರುವ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಜಮೀನು ಲಭ್ಯವಿಲ್ಲದಿದ್ದಲ್ಲಿ ಅದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಚಿವರು ತಿಳಿಸಿದರು.
ಜಾನುವಾರು ವಿಮೆಗಳ ಕ್ಲೈಮ್ ಸಂದರ್ಭದಲ್ಲಿ ವಿಮಾ ಕಂಪನಿಗಳು ರೈತರಿಗೆ ಸ್ಪಂದಿಸುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ, ಕೇಂದ್ರ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದರು.
ಪುತ್ತೂರಿಗೆ ಪಶುಸಂಗೋಪನೆ ಪಾಲಿ ಕ್ಲಿನಿಕ್ ಮಂಜೂರಾಗಿದ್ದು, ಶೀಘ್ರದಲ್ಲಿಯೇ ವಿವಿಧ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವಂತೆ ಸಚಿವ ವೆಂಕಟೇಶ್ ತಿಳಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸುಳ್ಯ ತಾಲೂಕು ಗೋಶಾಲೆ ನಿರ್ಮಾಣಕ್ಕೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇತರ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದರು. ಕೊೈಲ ಜಾನುವಾರು ಕೇಂದ್ರದಲ್ಲಿ ದೊರಕುವ ಹಾಲು ಸ್ಥಳೀಯರಿಗೆ ದೊರಕುವಂತಾಗಬೇಕು. ಪಶು ವೈದ್ಯಕೀಯ ಕಾಲೇಜಿನ ತರಗತಿಯನ್ನು ಆದಷ್ಟು ಶೀಘ್ರವೇ ಆರಂಭಿಸುವಂತೆ ಸಚಿವರಲ್ಲಿ ಆಗ್ರಹಿಸಿದರು.
ಕೊೈಲ ಜಾನುವಾರು ಸಂವರ್ಧನಾ ಕೇಂದ್ರವು 1951 ರಲ್ಲಿ ಸ್ಥಾಪನೆಯಾಗಿದೆ. ಇಲ್ಲಿನ 247 ಎಕರೆ ಜಮೀನನ್ನು ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಾಗೂ 98 ಎಕರೆ ಜಮೀನನ್ನು ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ನೀಡಲಾಗಿದೆ. ಜಿಲ್ಲಾ ಗೋಶಾಲೆಗೆ ರಾಜ್ಯ ಸರಕಾರದಿಂದ ಈವರೆಗೆ ರೂ.1.91 ಕೋಟಿ ಅನುದಾನ ಬಂದಿದೆ. ಪ್ರಸ್ತುತ ಈ ಗೋಶಾಲೆಯಲ್ಲಿ 154 ಜಾನುವಾರುಗಳು ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯಾ, ಪಶು ಸಂಗೋಪನೆ ಇಲಾಖೆ ಆಯುಕ್ತೆ ಶಿಲ್ಪಾ ನಾಗ್, ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ಸಿ ವೀರಣ್ಣ, ಡಾ.ಸುಶಾಂತ್ ರೈ, ಮತ್ತಿತರರು ಉಪಸ್ಥಿತರಿದ್ದರು.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಸಭೆಗೆ ಇಲಾಖಾ ಮಾಹಿತಿ ನೀಡಿದರು. ಜಾನುವಾರ ತಳಿ ಸಂವರ್ಧನ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಚಿದಾನಂದ ಸ್ವಾಗತಿಸಿದರು.
ಇದಕ್ಕೂ ಮೊದಲು ಸಚಿವರು ಪಶು ವೈದ್ಯಕೀಯ ಕಾಲೇಜು ಕಟ್ಟಡ, ಜಿಲ್ಲಾ ಗೋಶಾಲೆ, ಹಾಗೂ ಜಾನುವಾರು ಸಂವರ್ಧನ ತರಬೇತಿ ಕೇಂದ್ರದ ವಿವಿಧ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
