Home Mangalorean News Kannada News ಮಂಗಳೂರು ರಸ್ತೆ ದುಸ್ಥಿತಿಗೆ ಬಿಜೆಪಿ ಆಡಳಿತದ ವೈಫಲ್ಯವೇ ಕಾರಣ: ಎ.ಸಿ. ವಿನಯರಾಜ್ ಆರೋಪ

ಮಂಗಳೂರು ರಸ್ತೆ ದುಸ್ಥಿತಿಗೆ ಬಿಜೆಪಿ ಆಡಳಿತದ ವೈಫಲ್ಯವೇ ಕಾರಣ: ಎ.ಸಿ. ವಿನಯರಾಜ್ ಆರೋಪ

Spread the love

ಮಂಗಳೂರು ರಸ್ತೆ ದುಸ್ಥಿತಿಗೆ ಬಿಜೆಪಿ ಆಡಳಿತದ ವೈಫಲ್ಯವೇ ಕಾರಣ: ಎ.ಸಿ. ವಿನಯರಾಜ್ ಆರೋಪ

ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-1ರಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಆರಂಭವಾಗದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ; ಎಂಟು ವರ್ಷಗಳ ಅಭಿವೃದ್ಧಿ ಕಾರ್ಯಗಳ ಕುರಿತು ಶ್ವೇತಪತ್ರ ಹೊರಡಿಸಲು ಆಗ್ರಹ

ಮಂಗಳೂರು: ಮಂಗಳೂರು ನಗರದ ರಸ್ತೆ ದುಸ್ಥಿತಿಗೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ್ ಕಾಮತ್ ಅವರ ವೈಫಲ್ಯವನ್ನು ಮರೆಮಾಚಲು ಪ್ರತಿಭಟನೆಯ ಹೆಸರಿನಲ್ಲಿ ರಾಜಕೀಯ ನಾಟಕ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಆರೋಪಿಸಿದ್ದಾರೆ.

ಅಕ್ಟೋಬರ್ 28ರಂದು ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಂಗಳೂರು ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಎಂಟು ವರ್ಷಗಳಿಂದ ಬಿಜೆಪಿ ಶಾಸಕರೇ ಇದ್ದರು. 2019ರಿಂದ 2025ರವರೆಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿತ್ತು. 2019ರಿಂದ 2023ರವರೆಗೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ನಗರದ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿಯನ್ನು ಶಾಸಕರು ಹಾಗೂ ಮಹಾನಗರ ಪಾಲಿಕೆಯ ಆಡಳಿತ ನಿರ್ವಹಿಸಬೇಕಿತ್ತು. ಆದರೆ, ಆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ನಗರದ ಕೆಲವು ರಸ್ತೆಗಳು ಹದಗೆಟ್ಟಿವೆ ಎಂದು ಅವರು ದೂರಿದ್ದಾರೆ.

ನಗರದ ಅಭಿವೃದ್ಧಿಗೆ ಅನುದಾನದ ಕೊರತೆ ಇರಲಿಲ್ಲ ಎಂದು ಹೇಳಿರುವ ವಿನಯರಾಜ್, 2018-19ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಯು.ಟಿ. ಖಾದರ್ ಅವರು ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-1ರ ಮೂಲಕ ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು ₹125 ಕೋಟಿ ಮೀಸಲಿಟ್ಟಿದ್ದರು ಎಂದು ತಿಳಿಸಿದ್ದಾರೆ. 2019ರ ಜುಲೈನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿದ್ದು, ಅದರಡಿ ಸುಮಾರು ₹60 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದ್ದವು ಎಂದು ಹೇಳಿದ್ದಾರೆ.

ಇದಲ್ಲದೆ, ಒಳಚರಂಡಿ ಕಾಮಗಾರಿಗಳಿಗೆ ಕೆ.ಯು.ಐ.ಡಿ.ಎಫ್.ಸಿ. ಮೂಲಕ ₹100 ಕೋಟಿ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2ರಡಿ ₹145 ಕೋಟಿ, ಶಾಸಕರ ವಿಶೇಷ ಅನುದಾನವಾಗಿ ₹25 ಕೋಟಿ ಹಾಗೂ ನೈಸರ್ಗಿಕ ವಿಕೋಪದಡಿ ಸುಮಾರು ₹10 ಕೋಟಿ ಅನುದಾನ ಲಭ್ಯವಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. 15ನೇ ಹಣಕಾಸು ಆಯೋಗದಿಂದ ಪ್ರತಿವರ್ಷ ಸುಮಾರು ₹19 ಕೋಟಿ, ರಾಜ್ಯ ಹಣಕಾಸು ಆಯೋಗದಿಂದ ಪ್ರತಿವರ್ಷ ಸುಮಾರು ₹5 ಕೋಟಿ ಅನುದಾನ ದೊರೆಯುತ್ತಿತ್ತು. ಇತ್ತೀಚಿನ ಸಚಿವ ಸಂಪುಟದ ನಿರ್ಧಾರದಂತೆ ರಸ್ತೆ ಅಭಿವೃದ್ಧಿಗೆ ₹400 ಕೋಟಿ ಅನುದಾನವೂ ಇದೆ. ಇದರ ಜೊತೆಗೆ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯೂ ಲಭ್ಯವಿದೆ. ಇಷ್ಟೊಂದು ಅನುದಾನಗಳಿದ್ದರೂ ಬಿಜೆಪಿ ಆಡಳಿತದ ಅವಧಿಯಲ್ಲಿ ರಸ್ತೆಗಳ ಹೊಂಡಗಳನ್ನು ಮುಚ್ಚಿ ನಿರ್ವಹಣೆ ಮಾಡದ ಕಾರಣ ಕೆಲವು ರಸ್ತೆಗಳು ಹದಗೆಟ್ಟಿವೆ ಎಂಬುದು ಅವರ ಆರೋಪವಾಗಿದೆ.

2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಾನಗರ ಪಾಲಿಕೆಗಳ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಇದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಿದೆ ಎಂದು ವಿನಯರಾಜ್ ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-1 ಅನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ ಎಂಬ ಶಾಸಕ ವೇದವ್ಯಾಸ್ ಕಾಮತ್ ಅವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಅವರು ಹೇಳಿದ್ದಾರೆ. 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಈ ಯೋಜನೆ ಸೇರಿದಂತೆ ಕೆಲವು ಕಾಮಗಾರಿಗಳು ನಿಯಮಬಾಹಿರವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರಂಭವಾಗದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಶಿವಭಾಗ್ ರಸ್ತೆಯ ಅಭಿವೃದ್ಧಿಗೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2, ₹400 ಕೋಟಿ ವಿಶೇಷ ಅನುದಾನ, 15ನೇ ಹಣಕಾಸು ಆಯೋಗ, ರಾಜ್ಯ ಹಣಕಾಸು ಆಯೋಗ ಅಥವಾ ಮಹಾನಗರ ಪಾಲಿಕೆಯ ಸಾಮಾನ್ಯ ನಿಧಿಯಿಂದ ಅನುದಾನ ಬಳಸಬಹುದಿತ್ತು. ಹಾಗಿದ್ದರೂ ಶಾಸಕ ವೇದವ್ಯಾಸ್ ಕಾಮತ್ ಅವರು ಈ ರಸ್ತೆಯನ್ನು ಏಕೆ ಅಭಿವೃದ್ಧಿಪಡಿಸಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಭಾಗದ ಕಾರ್ಪೊರೇಟರ್ ಅವರ ವೈಫಲ್ಯವೂ ಇದರಲ್ಲಿ ಇದೆ ಎಂದು ವಿನಯರಾಜ್ ಆರೋಪಿಸಿದ್ದಾರೆ.

ನಿಯಮಬಾಹಿರ ಅಥವಾ ಅಕ್ರಮ ಕಾಮಗಾರಿಗಳು ಕಂಡುಬಂದಾಗ ಅವುಗಳನ್ನು ಸ್ಥಗಿತಗೊಳಿಸುವುದು ಅಥವಾ ರದ್ದುಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-1ರ ಕೆಲವು ಕಾಮಗಾರಿಗಳಲ್ಲಿ ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಗಿತಗೊಂಡ ಕಾಮಗಾರಿಗಳಲ್ಲಿ ಕಂಡುಬಂದ ಅಕ್ರಮಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಕಳೆದ ಎಂಟು ವರ್ಷಗಳ ಅಭಿವೃದ್ಧಿ ಕಾರ್ಯಗಳ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿ, ತಮ್ಮ ಪ್ರಯತ್ನದಿಂದ ಮಂಗಳೂರು ನಗರಕ್ಕೆ ಎಷ್ಟು ಕೋಟಿ ರೂಪಾಯಿ ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ವಿನಯರಾಜ್ ಆಗ್ರಹಿಸಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಮಂಗಳೂರು ದಸರಾ ರಾಜಕೀಯೇತರ ಉತ್ಸವವಾಗಿದ್ದು, ವರ್ಷದಿಂದ ವರ್ಷಕ್ಕೆ ಅದನ್ನು ಇನ್ನಷ್ಟು ಆಕರ್ಷಕವಾಗಿ ರೂಪಿಸಲು ಜಾತಿ-ಮತ ಭೇದವಿಲ್ಲದೆ ಎಲ್ಲರೂ ಸಹಕರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಮಂಗಳೂರು ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವ ಕುರಿತು ಮಹಾನಗರ ಪಾಲಿಕೆಯಲ್ಲಿ ಎಲ್ಲ ಪಕ್ಷಗಳ ಒಮ್ಮತದ ನಿರ್ಧಾರದಂತೆ ನಿರ್ಣಯ ಕೈಗೊಳ್ಳಲಾಗಿದೆ. ಈ ಕಾರ್ಯವನ್ನು ತಮ್ಮ ವೈಯಕ್ತಿಕ ಕೊಡುಗೆಯೆಂಬಂತೆ ಶಾಸಕ ವೇದವ್ಯಾಸ್ ಕಾಮತ್ ಬಿಂಬಿಸುವುದನ್ನು ನಿಲ್ಲಿಸಬೇಕು. ನಗರ ಅಲಂಕಾರಕ್ಕೆ ಮಹಾನಗರ ಪಾಲಿಕೆಯು ಸಾರ್ವಜನಿಕರ ತೆರಿಗೆ ಹಣವನ್ನು ಬಳಸುತ್ತಿದೆ ಎಂದು ಎ.ಸಿ. ವಿನಯರಾಜ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version