ಫೆ.18: ಮಂಗಳೂರಿಗೆ ಸಿಐಎಸ್‌ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್
ಮಂಗಳೂರು: ಸಿಐಎಸ್‌ಎಫ್ ವತಿಯಿಂದ ಸಿಐಎಸ್‌ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್-2026 ಎಂಬ ಐತಿಹಾಸಿಕ ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಫೆ.18ರಂದು ಮಂಗಳೂರಿಗೆ ಆಗಮಿಸಲಿದೆ.
ವಂದೇ ಮಾತರಂ 150ನೇ ವಾರ್ಷಿಕೋತ್ಸವದ ಅಂಗವಾಗಿ ಸೈಕ್ಲೋಥಾನ್-2026 ಹಮ್ಮಿಕೊಳ್ಳಲಾಗಿದೆ. ಜ.28ರಂದು ಆರಂಭಗೊಂಡ ಸೈಕ್ಲೋಥಾನ್ ಫೆ,21ರಂದು ಕೊಚ್ಚಿಯಲ್ಲಿ ಸಮಾರೋಪಗೊಳ್ಳಲಿದೆ. ರಾಷ್ಟ್ರೀಯ ಏಕತೆ, ಕರಾವಳಿ ಭದ್ರತೆ ಹಾಗೂ ಕರಾವಳಿ ಪ್ರದೇಶಗಳ ಸದೃಢ ಮತ್ತು ಸತತ ಅಭಿವೃದ್ಧಿಯತ್ತ ಸಾಗಲು ಇದು ಪ್ರಯತ್ನಿಸಲಿದೆ. ವಷರ್ಪೂರ್ತಿ ನಡೆಯುವ ಈ ಜನಜಾಗೃತಿ ಕಾರ್ಯಕ್ರಮದಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೆ ಸಾಮಾಜಿಕ ಜಾಗೃತಿ, ಪರಿಸರ ಸಂರಕ್ಷಣೆ ಹಾಗೂ ಭಾರತದ ವಿಶಾಲ ಕರಾವಳಿಯ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಗೆ ಉತ್ತೇಜನ ನೀಡಲಾಗುತ್ತದೆ. ಇದರಲ್ಲಿ 65 ಮಹಿಳಾ ಸೈಕ್ಲಿಸ್ಟ್‌ಗಳ ಸಹಿತ 130 ಸಿಐಎಸ್‌ಎಫ್ ಸಿಬ್ಬಂದಿ ವರ್ಗ ಭಾಗವಹಿಸುತ್ತಿದೆ.
ಈ ಸೈಕ್ಲೋಥಾನ್ ಭೇಟಿಯ ಸಂದರ್ಭ ಕರಾವಳಿ ಕೇಂದ್ರೀಕೃತ 52 ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾ ಗಿದೆ. ಮುಖ್ಯವಾಗಿ, ಕರಾವಳಿ ಭದ್ರತೆ, ಕೌಶಲಾಭಿವೃದ್ಧಿ, ಜೀವನೋಪಾಯವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ.
ಫೆ.18ರಂದು ಸಂಜೆ 7ಕ್ಕೆ ಸೈಕ್ಲೋಥಾನ್ ತಂಡವನ್ನು ಪಣಂಬೂರು ಬೀಚ್‌ನಲ್ಲಿ ಸ್ವಾಗತಿಸಲಾಗುತ್ತದೆ. ಫೆ.19ರಂದು ಮಂಗಳೂರಿನಿಂದ ಸೈಕ್ಲೋಥಾನ್ ಮುಂದುವರೆಯಲಿದೆ ಎಂದು ಸಿಐಎಸ್‌ಎಫ್ ಎನ್‌ಎಂಪಿಎ ಘಟಕದ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
