ಶೀರೂರು ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯ: ಜ.9 ರಂದು ಪುರಪ್ರವೇಶ, ಪೌರಸಮ್ಮಾನ
ಉಡುಪಿ: ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ದೇಶಾದ್ಯಂತ ಧಾರ್ಮಿಕ ಕ್ಷೇತ್ರಗಳ ಪರ್ಯಟನೆ ನಡೆಸಿ ಜನವರಿ 9 ರಂದು ಶ್ರೀ ಶೀರೂರು ಮೂಲಮಠದಿಂದ ಶ್ರೀರಾಮಚಂದ್ರ ದೇವರ ಮತ್ತು ಶ್ರೀಮುಖ್ಯಪ್ರಾಣರ ದರ್ಶನ ಮಾಡಿಕೊಂಡು ಹೊರಟು, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವರ ದರ್ಶನ ಮಾಡಿ ಅಲ್ಲಿಂದ ಮಧ್ಯಾಹ್ನ ಸುಮಾರು ಮೂರು ಗಂಟೆ ಸಮಯಕ್ಕೆ ಮೆರವಣಿಗೆಯೊಂದಿಗೆ ಪುರಪದೇಶ ಮಾಡಲಿದ್ದಾರೆ ಎಂದು ಪರ್ಯಾಯ ಸಮಿತಿಯ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಸಂದರ್ಭದಲ್ಲಿ ಶ್ರೀ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರ ವತಿಯಿಂದ ಶ್ರೀಪಾದರನ್ನು ಪಟ್ಟದ ದೇವರೊಂದಿಗೆ ಕಡಿಯಾಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಆದರದಿಂದ ಬರಮಾಡಿಕೊಳ್ಳಲಾಗುವುದು.
ಭಾವೀ ಪರ್ಯಾಯ ಶ್ರೀಪಾದರು ಪುರ ಪ್ರವೇಶ ಮಾಡುವ ಸಂದರ್ಭದಲ್ಲಿ ಸುಮಾರು ಐದು ಸಾವಿರ ಜನ ಸೇರುವ ನಿರೀಕ್ಷೆಯಿದ್ದು ಇದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕರುಗಳು,ಭಜನಾ ತಂಡಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಯ ಸದಸ್ಯರು, ಯುವಕ ಯುವತಿ ಮಂಡಲದ ಸದಸ್ಯರು ವಿವಿಧ ಕಲಾತಂಡಗಳ ಪ್ರದರ್ಶನಗಳು, ಸಾಂಸ್ಕೃತಿಕ ತಂಡದವರು, ವಿಶೇಷ ಟ್ಯಾಬ್ಲೊಗಳು ಮೆರವಣಿಗೆಗೆ ವಿಶೇಷ ಮೆರುಗನ್ನು ಕೊಡಲಿದ್ದು ಕಡಿಯಾಳಿಯಿಂದ ಹೊರಟ ಪುರಪ್ರವೇಶ ಮೆರವಣಿಗೆ ಕಲ್ಸಂಕ ಮಾರ್ಗವಾಗಿ ಸಿಟಿ ಬಸ್ ನಿಲ್ದಾಣ, ಕಿದಿಯೂರು ಹೋಟೆಲ್ ಮಾರ್ಗವಾಗಿ ಬಸ್ ನಿಲ್ದಾಣದ ಮುಖಾಂತರ ಹನುಮಾನ್ (ತ್ರಿವೇಣಿ) ವೃತ್ತದಿಂದ ಕನಕದಾಸ ರಸ್ತೆ ಮಾರ್ಗವಾಗಿ ರಥ ಬೀದಿಗೆ ಪ್ರವೇಶಿಸಲಿದೆ.
ಪೂಜ್ಯ ಸ್ವಾಮೀಜಿಯವರು ರಥಭೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆದು ಆ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದೇವರ ಹಾಗೂ ಶ್ರೀ ಕೃಷ್ಣ ಮುಖ್ಯ ಪ್ರಾಣದೇವರ ದರ್ಶನ ಮಾಡಿಕೊಂಡು ಉಡುಪಿ ನಗರಸಭೆ ವತಿಯಿಂದ ನಡೆಯಲಿರುವ ಪೌರ ಸಮ್ಮಾನ ವೇದಿಕೆಗೆ ಬಂದು ನಗರಸಭೆ.ವಿವಿಧ ಸಂಘ ಸಂಸ್ಥೆ ಮತ್ತು ಸಾರ್ವಜನಿಕರಿಂದ ಸಮ್ಮಾನವನ್ನು ಸ್ವೀಕರಿಸಲಿರುವರು.
ಈ ಸಮಾರಂಭವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ಉದ್ಘಾಟಿಸಲಿದ್ದು, ಶಾಸಕರಾದ ಶ್ರೀ ಯಶಪಾಲ್ ಸುವರ್ಣರವರು ಅಧ್ಯಕ್ಷತೆ ವಹಿಸಲಿದ್ದು ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ ಶ್ರೀಮತಿ ಸ್ಮರೂಪಾ ಟಿ ಕೆ, ನಗರಸಭಾ ಆಯುಕ್ತರಾದ ಶ್ರೀ ಮಹಾಂತೇಶ ಹಂಗರಗಿ, ಮಠದ ದಿವಾನರಾದ ಡಾ|| ಶ್ರೀ ಉದಯ ಕುಮಾರ್ ಸರಳತ್ತಾಯ, ಪ್ರಧಾನ ಕಾರ್ಯದರ್ಶಿ ಶ್ರೀ ಮಟ್ಟಾರು ರತ್ನಾಕರ ಹೆಗಡ ಮುಂತಾದವರು ಭಾಗವಹಿಸಲಿರುವರು. ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು ಇದರ ಪ್ರಾಂಶುಪಾಲರಾದ ವಿಜ್ಞಾನ್ ಡಾ॥ ಶ್ರೀ ಸತ್ಯನಾರಾಯಣ ಆಚಾರ್ಯರು ಅಭಿನಂದನಾ ಭಾಷಣವನ್ನು ಮಾಡಲಿರುವರು.
ಪೌರ ಸಮ್ಮಾನದ ನಂತರ ಅದೇ ವೇದಿಕೆಯಲ್ಲಿ ಜನವರಿ 09 ಶುಕ್ರವಾರದಿಂದ 17 ಜನವರಿ ಶನಿವಾರದ ವರೆಗೆ ಪ್ರತಿದಿನ ಹೆಸರಾಂತ ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹೊರ ಕಾಣಿಕೆ ಮೆರವಣಿಗೆ : ಪರ್ಯಾಯ ಮಹೋತ್ಸವದಲ್ಲಿ ಹೊರೆ ಕಾಣಿಕೆ ಅತ್ಯಂತ ಪ್ರಮುಖ ಅಂಗವಾಗಿದ್ದು ಇದರ ಸಂಚಾಲಕರಾದ ಶ್ರೀ ಸುಪ್ರಸಾದ ಶೆಟ್ಟಿ ಇವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರಿಂದ, ಧಾರ್ಮಿಕ ಕ್ಷೇತ್ರಗಳಿಂದ ವಿವಿಧ ಸಂಘಟನೆಗಳಿಂದ ಸಮರೋಪಾದಿಯಲ್ಲಿ ಹೊರೆ ಕಾಣಿಕೆ ಸಾಗಿ ಬರಲಿದೆ. ದಿನಾಂಕ 10.01.2026 ರಿಂದ 17.01.2026 ರ ಶನಿವಾರದ ವರೆಗೆ ನಿರಂತರ ಹೊರೆ ಕಾಣಿಕೆ ಸಾಗಿ ಬರಲಿದೆ. ಹೊರೆ ಕಾಣಿಕೆ ಮೆರವಣಿಗೆಯು ಜೋಡುಕಟ್ಟೆಯಿಂದ ಹೊರಟು ಶ್ರೀ ಕೃಷ್ಣಮಠದ ಪಾರ್ಕಿಂಗ್ ಜಾಗದಲ್ಲಿರುವ ಉಗ್ರಾಣವನ್ನು ತಲುಪಲಿದೆ ಇಲ್ಲಿ ಹೊರೆ ಕಾಣಿಕೆಯಿಂದ ಬಂದ ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು ಇದರೊಂದಿಗೆ ಬೇರೆಬೇರೆ ಮಳಿಗೆಗಳು ಬರಲಿದ್ದು, ಇದನ್ನು ಬೃಹತ್ ವಸ್ತು ಪ್ರದರ್ಶನವಾಗಿ ಮಾರ್ಪಾಡು ಮಾಡಲಾಗುವುದು.
ಇದೇ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು ದಿನಾಂಕ 10.01. 2026 ರ ಸಂಜೆಯಿಂದ 27.01.2026 ರ ವರೆಗೆ ರಾಷ್ಟ್ರ ರಾಜ್ಯದ ಹೆಸರಾಂತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ಅಲ್ಲಿ ಸ್ವತಃ ಸ್ವಾಮೀಜಿಯವರು ಹೊರೆ ಕಾಣಿಕೆ ತಂಡಗಳನ್ನು ಬರಮಾಡಿಕೊಂಡು ತಂಡದ ಮುಖ್ಯಸ್ಥರು ಹಾಗೂ ಸದಸ್ಯರನ್ನು ಆಶೀರ್ವಚಿಸಿ ಅನುಗ್ರಹ ಪತ್ರ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಸಂಚಾಲಕರಾದ ಜಯಕರ ಶೆಟ್ಟಿ ಇಂದ್ರಾಳಿ, ಜಯಪ್ರಕಾಶ್ ಕೆದ್ಲಾಯ, ಮೋಹನ್ ಭಟ್, ಸುಪ್ರಸಾದ್ ಶೆಟ್ಟಿ ಬೈಕಾಡಿ, ರಮೇಶ್ ಕಾಂಚನ್, ದಿನಕರ ಹೇರೂರು ಹಾಗೂ ಇತರರು ಉಪಸ್ಥಿತರಿದ್ದರು.