ಮಂಗಳೂರಿನಲ್ಲಿ ನವೆಂಬರ್ 3ರಿಂದ 15ರವರೆಗೆ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ: ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣಕ್ಕೆ ಪ್ರಯತ್ನ
ಮಂಗಳೂರು: ಕೊಂಕಣಿ ಭಾಷೆ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ 40ನೇ ವರ್ಷಾಚರಣೆಯ ಅಂಗವಾಗಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ಆಯೋಜಿಸಿದೆ. ನವೆಂಬರ್ 3ರಿಂದ 15ರವರೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಈ ಮಹಾ ಸಮ್ಮೇಳನದಲ್ಲಿ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ನಿರಂತರ ಸಮೂಹ ಗಾಯನದ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗುವುದು.
1986ರಲ್ಲಿ ಆರಂಭವಾದ ಮಾಂಡ್ ಸೊಭಾಣ್, ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಕೊಂಕಣಿ ಸಮುದಾಯದ ಜನರನ್ನು ವಿಶ್ವದ ವಿವಿಧ ಭಾಗಗಳಿಂದ ಒಗ್ಗೂಡಿಸಿ, ಸಂಗೀತದ ಮೂಲಕ ಭಾಷೆಯ ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವುದು ಹಾಗೂ ಕೊಂಕಣಿ ಅಭಿಮಾನವನ್ನು ಬೆಳೆಸುವುದು ಈ ಮಹಾ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಾಂಡ್ ಸೊಭಾಣ್ ಗುರಿಕಾರ ದಿ. ಎರಿಕ್ ಒಝೇರಿಯೊ ಅವರ ಗೌರವಾರ್ಥ ಈ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 3ರಂದು ಬೆಳಿಗ್ಗೆ 5 ಗಂಟೆಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಪುರಭವನದಲ್ಲಿ ಮಹಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್ ಕುಲಾಸೊ ಅಧ್ಯಕ್ಷತೆ ವಹಿಸಲಿದ್ದಾರೆ.
ನವೆಂಬರ್ 3ರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗುವ ‘ಕೊಂಕಣಿ ನಿರಂತರಿ – ಸಂಸಾರ್ ಸರಾಸರಿ’ ಎಂಬ ಹೆಸರಿನ ಸಮೂಹ ಗಾಯನ ಕಾರ್ಯಕ್ರಮ ನವೆಂಬರ್ 15ರಂದು ಸಂಜೆ 6.12ಕ್ಕೆ ಮುಕ್ತಾಯಗೊಳ್ಳಲಿದೆ. ‘ಕೊಂಕಣಿ ನಿರಂತರವಾಗಿರಲಿ, ಜಗದ ಕೊನೆತನಕ ಉಳಿಯಲಿ’ ಎಂಬ ಸಂದೇಶ ಸಾರುವ ಈ ಪ್ರಯತ್ನದಲ್ಲಿ ಭಾರತ, ಆಸ್ಟ್ರೇಲಿಯಾ, ಕುವೈತ್, ಓಮನ್ ಮತ್ತು ಖತಾರ್ ಸೇರಿದಂತೆ ವಿವಿಧ ದೇಶಗಳ ಕೊಂಕಣಿ ಸಮುದಾಯದ ಗಾಯಕರು ಭಾಗವಹಿಸಲಿದ್ದಾರೆ.
ಕ್ರೈಸ್ತ, ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ), ಕುಡಾಲ್ ದೇಶಸ್ಥ, ಖಾರ್ವಿ, ಕುಡುಮಿ, ಸಿದ್ದಿ, ನವಾಯತಿ ಮತ್ತು ಸಿರಿಯನ್ ಕ್ರೈಸ್ತ ಸೇರಿದಂತೆ ವಿವಿಧ ಸಮುದಾಯಗಳ ಸದಸ್ಯರು ಹಾಗೂ ಇತರ ಭಾಷಿಕರೂ ಈ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. 6,789ಕ್ಕೂ ಹೆಚ್ಚು ಗಾಯಕರು, 250ಕ್ಕೂ ಹೆಚ್ಚು ಸಂಗೀತ ಸಂಯೋಜಕರ ರಚನೆಗಳನ್ನೊಳಗೊಂಡ 4,500ಕ್ಕೂ ಹೆಚ್ಚು ಕೊಂಕಣಿ ಹಾಡುಗಳನ್ನು ಹಾಡುವ ಗುರಿ ಹೊಂದಲಾಗಿದೆ. ಒಟ್ಟು 300 ತಂಡಗಳು ತಲಾ ಒಂದು ಗಂಟೆ ಹಾಡಲಿದ್ದು, ಯಾವುದೇ ಗಾಯಕರು ಪುನರಾವರ್ತನೆಯಾಗದಂತೆ ಕಾರ್ಯಕ್ರಮ ರೂಪಿಸಲಾಗಿದೆ. ಸಂಗೀತ ಗುರು ಜೊಯೆಲ್ ಪಿರೇರಾ ಪ್ರಧಾನ ಸಂಗೀತ ನಿರ್ದೇಶಕರಾಗಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆ ಪ್ರಯತ್ನಕ್ಕೆ ಈಗಾಗಲೇ ಲಂಡನ್ನಲ್ಲಿರುವ ಗಿನ್ನೆಸ್ ಕಚೇರಿಯಲ್ಲಿ ನೋಂದಣಿ ಮಾಡಲಾಗಿದ್ದು, ಅಧಿಕೃತ ಹಿರಿಯ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಹಾ ಸಮ್ಮೇಳನಕ್ಕೆ ಶೈಕ್ಷಣಿಕ ಹಾಗೂ ಅಂತರರಾಷ್ಟ್ರೀಯ ಆಯಾಮ ನೀಡುವ ಉದ್ದೇಶದಿಂದ 12 ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ. ಗೋವಾ ಮತ್ತು ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಕೊಂಕಣಿ ಭಕ್ತಿ ಸಂಗೀತ, ಜನಪದ ಸಂಗೀತ, ಆರೋಗ್ಯಕ್ಕಾಗಿ ಸಂಗೀತ, ಅಂತರರಾಷ್ಟ್ರೀಯ ಸಂಗೀತ, ಬಾಯ್ಲಾ ಸಂಗೀತ, ಸಂಗೀತಗಾರರು ಮತ್ತು ಅವರ ರಚನೆಗಳು, ರಂಗಭೂಮಿ ಹಾಗೂ ಸಿನಿಮಾ ಸಂಗೀತ, ಮಾಂಡ್ ಸೊಭಾಣ್ ಸಂಗೀತದ ಪ್ರಭಾವ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಸಂಗೀತ ಮೊದಲಾದ ವಿಷಯಗಳ ಕುರಿತು ತಜ್ಞರು ಪ್ರಬಂಧ ಮಂಡಿಸಲಿದ್ದಾರೆ.
ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ 12 ಹಿರಿಯ ಸಂಗೀತ ಸಾಧಕರನ್ನು ‘ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಇವರಲ್ಲಿ ಐವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ದಿ. ಕ್ರಿಸ್ ಪೆರಿ (ಗೋವಾ), ಲಾರೆನ್ಸ್ ಸಲ್ಡಾನ್ಹಾ (ಮುಂಬಯಿ), ಫಾ. ಲಿನೊ ಡೆಸಾ (ಗೋವಾ), ದಿ. ವಸಂತಿ ಆರ್. ನಾಯಕ್ (ಮಂಗಳೂರು), ದಿ. ಆಲ್ಫ್ರೆಡ್ ರೋಸ್ (ಗೋವಾ), ಶ್ರೀಧರ್ ಖಾರ್ವಿ (ಭಟ್ಕಳ), ಮೆಲ್ವಿನ್ ಪೆರಿಸ್ (ಮಂಗಳೂರು), ನೇಮಿರಾಜ ಗೌಡ (ಕೊಂಪದವು, ದಕ್ಷಿಣ ಕನ್ನಡ), ದಿ. ಜೆರೊಮ್ ಡಿಸೋಜ (ಮುಂಬಯಿ), ಮಾಮ್ದು ಇಬ್ರಾಹಿಂ (ಶಿರೂರು), ದಿ. ಉಲ್ಲಾಸ್ ಬುಯಾಂವ್ (ಗೋವಾ) ಮತ್ತು ಜುಲಿಯಾನ ಸಿದ್ದಿ (ಹಳಿಯಾಳ) ಅವರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳನ್ನೂ ಕೊಂಕಣಿ ಸಂಗೀತದೊಂದಿಗೆ ಬೆಸೆಯುವ ಉದ್ದೇಶದಿಂದ 10ರಿಂದ 16 ವರ್ಷದ ಮಕ್ಕಳನ್ನು ಒಳಗೊಂಡ ‘ಫುಲ್ ಫುಲೊತಾ’ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ನವೆಂಬರ್ 13ರಂದು ಪುರಭವನದ ಎದುರಿನ ರಾಜಾಜಿ ಪಾರ್ಕ್ನ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಇದರೊಂದಿಗೆ ಪುರಭವನದ ಹೊರಾಂಗಣದಲ್ಲಿ ಕೊಂಕಣಿ ಸಂಗೀತ, ಜನಜೀವನ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ವಸ್ತುಪ್ರದರ್ಶನ ನಡೆಯಲಿದೆ. ಕೊಂಕಣಿ ಸಂಗೀತಕ್ಕೆ ಕೊಡುಗೆ ನೀಡಿದ ಹಿರಿಯ ಮತ್ತು ಕಿರಿಯ ಕಲಾವಿದರ ಪರಿಚಯ ಒಳಗೊಂಡ ‘ಕೀರ್ತಿ ಮಂದಿರ’ ಹಾಗೂ ವಿವಿಧ ಕೊಂಕಣಿ ಸಮುದಾಯಗಳ ಆಹಾರ ಪದ್ಧತಿಯನ್ನು ಪರಿಚಯಿಸುವ ಖಾದ್ಯ ಮಳಿಗೆಗಳೂ ಇರಲಿವೆ.
ನವೆಂಬರ್ 15ರಂದು ಸಂಜೆ 6.12ಕ್ಕೆ ನಿರಂತರ ಸಮೂಹ ಗಾಯನ ಮುಕ್ತಾಯಗೊಂಡ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಮಹಾ ಸಮ್ಮೇಳನದ ಸಿದ್ಧತೆಗಳನ್ನು 2025ರ ಆಗಸ್ಟ್ 31ರಂದು ಮಾಂಡ್ ಸೊಭಾಣ್ ಗುರಿಕಾರ ದಿ. ಎರಿಕ್ ಒಝೇರಿಯೊ ಅವರ ಅಂತ್ಯಕ್ರಿಯೆಯ ದಿನ ಸಾರ್ವಜನಿಕವಾಗಿ ಘೋಷಿಸಿದ ಬಳಿಕ ಆರಂಭಿಸಲಾಗಿತ್ತು. ಸಾವಿರಾರು ಹಾಡುಗಳ ಸಂಗ್ರಹ ಮತ್ತು ಸಾಹಿತ್ಯದ ದಾಖಲೀಕರಣ, 300 ತಂಡಗಳ ರಚನೆ, ಹಾಡುಗಳ ಹಂಚಿಕೆ, ಮೈನಸ್ ಟ್ರ್ಯಾಕ್ ಸಿದ್ಧಪಡಿಸುವಿಕೆ, ಪೂರ್ವಾಭ್ಯಾಸದ ಮೇಲ್ವಿಚಾರಣೆಗೆ 40 ಸಹಾಯಕ ಸಂಗೀತ ನಿರ್ದೇಶಕರ ನೇಮಕ, ಹಾಜರಾತಿ ಮತ್ತು ಘೋಷಣಾ ಪತ್ರಗಳ ದಾಖಲೀಕರಣ ಹಾಗೂ ತಂಡಗಳ ವಸತಿ, ಪ್ರಯಾಣ ಮತ್ತು ಊಟೋಪಚಾರದ ವ್ಯವಸ್ಥೆ ಸೇರಿದಂತೆ ವಿವಿಧ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸ್ವಯಂಸೇವಕರಿಗೂ ಮಾಹಿತಿ ಮತ್ತು ತರಬೇತಿ ನೀಡಲಾಗಿದೆ.
ಸಮ್ಮೇಳನಕ್ಕೆ ಅಂದಾಜು ಮೂರು ಕೋಟಿ ರೂಪಾಯಿ ವೆಚ್ಚವಾಗಲಿದೆ. ಕೊಂಕಣಿ ಸಂಗೀತದ ಬೆಳವಣಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಭಾಷೆಯ ಸಾಂಸ್ಕೃತಿಕ ಪರಂಪರೆಯನ್ನು ತಲುಪಿಸಲು ಈ ಕಾರ್ಯಕ್ರಮ ಮಹತ್ವದ ಕೊಡುಗೆ ನೀಡಲಿದೆ ಎಂಬ ವಿಶ್ವಾಸವನ್ನು ಸಂಘಟಕರು ವ್ಯಕ್ತಪಡಿಸಿದ್ದಾರೆ. ಸರ್ಕಾರ, ಸಾರ್ವಜನಿಕರು ಹಾಗೂ ವಿವಿಧ ಸಮುದಾಯಗಳ ಸಹಕಾರದೊಂದಿಗೆ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಮಾಂಡ್ ಸೊಭಾಣ್ ಸಂಘಟಕ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಹಾಗೂ ಗೋವಾ ಸಂಯೋಜಕ ಮೈಕಲ್ ಜೂಡ್ ಗ್ರೇಶಿಯಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
