ಮಂಗಳೂರಿನ ಕುಡ್ಪೀಸ್ ಫುಡ್ಸ್ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ: ಅನೈರ್ಮಲ್ಯ ಹಿನ್ನೆಲೆಯಲ್ಲಿ ಉತ್ಪನ್ನಗಳು ಸೀಜ್
ಮಂಗಳೂರು: ನಗರದ ಕದ್ರಿ ದೇವಸ್ಥಾನದ ಸಮೀಪದಲ್ಲಿರುವ ಕುಡ್ಪೀಸ್ ಫುಡ್ಸ್ ಆಹಾರ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಆಹಾರ ಉತ್ಪಾದನಾ ಘಟಕದಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರು. ಅನೈರ್ಮಲ್ಯ ಪರಿಸ್ಥಿತಿಯಲ್ಲಿ ತಯಾರಿಸಲಾಗಿದೆ ಎಂದು ಗುರುತಿಸಲಾದ ಹಲ್ವಾ ಹಾಗೂ ಖರ್ಜೂರ ಉತ್ಪನ್ನಗಳನ್ನು ವಶಕ್ಕೆ ಪಡೆದು ಸೀಜ್ ಮಾಡಿ ಸೀಲ್ ಮಾಡಲಾಗಿದ್ದು, ಪ್ರಯೋಗಾಲಯದ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಹಬ್ಬಗಳ ಸಂದರ್ಭದಲ್ಲಿ ತಯಾರಿಸುವ ಆಹಾರ ಉತ್ಪನ್ನಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳು ಸೂಚಿಸಿದರು. ಆಹಾರ ವಿಷಬಾಧೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಉತ್ಪನ್ನಗಳನ್ನು ತಯಾರಿಸಬೇಕು. ಡ್ರೈನೇಜ್ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವುದರ ಜೊತೆಗೆ ಕೀಟಗಳು, ಜಿರಳೆಗಳು ಹಾಗೂ ಇಲಿಗಳು ಆಹಾರ ತಯಾರಿಕಾ ಘಟಕದೊಳಗೆ ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಆಹಾರ ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ಬಳಿಕವೇ ಆಹಾರ ಉತ್ಪನ್ನಗಳ ತಯಾರಿಕೆ ನಡೆಸುವಂತೆ ಸೂಚಿಸಲಾಯಿತು. ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿದ್ದ ಸಾಮಗ್ರಿಗಳನ್ನು ಅಧಿಕಾರಿಗಳು ಸೀಜ್ ಮಾಡಿ ಸೀಲ್ ಮಾಡಿದರು.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ತಂಡ ಈ ದಾಳಿ ನಡೆಸಿತು.
