ಕೋಟ| ಗುಜರಿ ವ್ಯಾಪಾರಿಗೆ ಜೀವ ಬೆದರಿಕೆ ಆರೋಪ: ನಾಗೇಂದ್ರ ಪುತ್ರನ್ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲು
ಉಡುಪಿ: ಗುಜರಿ ವ್ಯಾಪಾರಿಯೋರ್ವರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಸಾಮಾಜಿಕ ಹೋರಾಟಗಾರ ನಾಗೇಂದ್ರ ಪುತ್ರನ್ ಸಹಿತ ಮೂವರ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡ್ಮಿ ನಿವಾಸಿ ಜಿ ಮೊಹಮ್ಮದ್ ಎಂಬವರು ಗುಜರಿ ವ್ಯಾಪಾರ ಮಾಡಿಕೊಂಡಿದ್ದು, ಆಗಸ್ಟ್ 31 ರಂದು ಸಚಿನ್ ಎಂಬವರು ಕರೆ ಮಾಡಿ 2 ಚೀಲ ಅಕ್ಕಿಯನ್ನು ಮಹಮ್ಮದ್ ಅವರ ಮನೆಯ ಅಂಗಳದಲ್ಲಿ ಇಟ್ಟಿರುವುದಾಗಿ ಹೇಳಿದ್ದು, ನಾನು ಮನೆಗೆ ಬರುವುದಾಗಿ ಮೊಹಮ್ಮದ್ ಹೇಳಿದ್ದು, ಅದೇ ಕೂಡಲೇ ನಾಗೇಂದ್ರ ಪುತ್ರನ್ ಅವರು ಕರೆ ಮಾಡಿ ಸರ್ಕಾರದ ಅಕ್ಕಿಯನ್ನು ಖರೀದಿ ಮಾಡಿ ಅಕ್ರಮವಾಗಿ ದಾಸ್ತಾನು ಇಟ್ಟಿರುವ ಬಗ್ಗೆ ನನಗೆ ತಿಳಿದಿದೆ ನಿನ್ನ ಮೇಲೆ ಪ್ರಕರಣ ದಾಖಲು ಮಾಡಿಸಿ ಜೈಲಿಗೆ ತಳ್ಳುವುದಾಗಿ ಹೇಳಿದ್ದು ಮೊಹಮ್ಮದ್ ಅವರು ಮನೆಗೆ ಬಂದಿದ್ದು ಈ ವೇಳೆ ನಾಗೆಂದ್ರ ಪುತ್ರನ್ ಹಾಗೂ ಪ್ರದೀಪ್ ಎಂಬವರು ಬೈಕಿನಲ್ಲಿ ಬಂದು ನಾನು ಸಾಮಾಜಿಕ ಕಾರ್ಯಕರ್ತ ನೀನು ಸರಕಾರದ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿದ್ದು ನಾನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತೇನೆ. ನಿನ್ನ ಮೇಲೆ ದೂರನ್ನು ದಾಖಲಿಸಿ ಜೈಲಲ್ಲಿ ಕೊಳೆಯುವ ಹಾಗೆ ಮಾಡುತ್ತೇನೆ ನೀನು ನನಗೆ 200000 ರೂ ಹಣವನ್ನು ಕೊಡುವಂತೆ ಕೇಳಿದ್ದಾನೆ. ಮೊಹಮ್ಮದ್ ಅವರು ತನಗೆ ತೊಂದರೆ ನೀಡದಂತೆ ವಿನಂತಿಸಿಕೊಂಡಾಗ ನಾಗೇಂದ್ರ ಪುತ್ರನ್ ಹಾಗೂ ಸಚಿನ್ ಸೇರಿಕೊಂಡು ಮೊಹಮ್ಮದ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಡೆಯದಾಗಿ 100000 ಹಣವನ್ನು ಕೊಡು ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರನ್ನು ಸ್ವೀಕರಿಸಿರುವ ಕೋಟ ಪೊಲೀಸರು ನಾಗೇಂದ್ರ ಪುತ್ರನ್, ಸಚಿನ್ ಹಾಗೂ ಪ್ರದೀಪ್ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
