ಬಡವರ ಸೇವೆಗೆ ದೇವರ ಆಶೀರ್ವಾದ ಇದೆ: ಬಿಷಪ್ ಪೀಟರ್ ಪಾವ್ಲ್ ಸಲ್ಡಾನಾ
ಉಡುಪಿ/ಮಂಗಳೂರು: ಬಡವರಿಗಾಗಿ ಮಾಡುವ ಸಹಾಯಕ್ಕೆ ದೇವರ ಕೃಪಾವರಗಳು ಸದಾ ಇದೆ. ಅವರ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಪೀಟರ್ ಪಾವ್ಲ್ ಸಲ್ಡಾನಾ ಹೇಳಿದರು.

ಅವರು ಭಾನುವಾರ ಮಂಗಳೂರು ಫಾದರ್ ಮುಲ್ಲರ್ಸ್ ಕನ್ವೆಶ್ನನ್ ಸೆಂಟರ್ ನಲ್ಲಿ ಜರುಗಿದ ಮಂಗಳೂರು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಇದರ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿರುವ, ದಕ ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ 50% ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಜೋಸೆಫ್ ಮಿನೇಜಸ್ ಸಾಸ್ತಾನ ಇವರ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಜಾನೆಟ್ ಫೆರ್ನಾಂಡಿಸ್ ಇವರ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಎರಡನೇ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಬಡವರಿಗಾಗಿ ಮರುಗುವವರು ಧನ್ಯವಂತರು ಎಂದು ಯೇಸುಸ್ವಾಮಿ ಹೇಳಿದ ಮಾತಿನಂತೆ ಇಂದು ಕ್ರೈಸ್ತ ಸಮುದಾಯ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿಯ ಮೂಲಕ ಬಡವರ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ. ಇದರಿಂದ ಬಡತನದಲ್ಲಿ ಇರುವ ಕುಟುಂಬಗಳಿಗೆ ಆಶ್ರಯದಾತರಾಗಿ ನಿಲ್ಲುವ ಪುಣ್ಯದ ಕೆಲಸ ವಿಶ್ವದಾದ್ಯಂತ ನಡೆಯುತ್ತಿದೆ. ಇಂತಹ ಮಾನವೀಯ ಕೆಲಸಕ್ಕೆ ದೇವರ ಆಶೀರ್ವಾದ ಕೂಡ ಇರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ ಕ್ರೈಸ್ತ ಸಮುದಾಯ ತನ್ನ ಸೇವೆಯ ಮೂಲಕ ಜಗತ್ತಿಗೆ ಮಾದರಿಯಾಗಿದೆ. ಕೇವಲ 2.5% ಜನಸಂಖ್ಯೆಯನ್ನು ಹೊಂದಿರುವ ಸಮುದಾಯದ ಕಾರ್ಯ ಜಾತಿ ಮತ ಭೇಧವಿಲ್ಲದೆ ದೇಶದ ಉಳಿದ 97.5% ಜನರಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಇಂತಹ ಸೇವೆಯಲ್ಲಿ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಸಂಘಟನೆ ಮುಂಚೂಣಿಯಲ್ಲಿರುವುದು ಶ್ಲಾಘನಾರ್ಹ ಸಂಗತಿ ಎಂದರು.
ಟ್ರಿನಿಟಿ ಮೆಡಿಕೇರ್ ಸರ್ವಿಸ್ ಇದರ ರೂವಾರಿ ಜೊಸೇಫ್ ಮಿನೇಜಸ್ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ಹುಟ್ಟುವಾಗ ತನಗೆ ಸಾವಿದೆ ಎಂಬುದನ್ನು ಅರಿತುಕೊಂಡೇ ಈ ಭೂಮಿಗೆ ಬರುತ್ತಾನೆ. ಹುಟ್ಟು ಮತ್ತು ಸಾವಿನ ಮಧ್ಯೆ ಆತನ ಬದುಕಿನ ಶೈಲಿ ದೇವರಿಗೆ ನೀಡುವ ಅತ್ಯುತ್ತಮ ಉಡುಗೊರೆಯಾಗಿದೆ. ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ನಮ್ಮ ಬದುಕು ದೇವರಿಗೆ ಮೆಚ್ಚುವಂತೆ ಬದುಕಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ಅಂತರರಾಷ್ಟ್ರೀಯ ಅಧ್ಯಕ್ಷರಾದ ಜುವಾನ್ ಮಾನ್ವೆಲ್ ಬ್ಯೂರೆಗೋ ಗೋಮ್ಸ್, ಗೌರವ ಅತಿಥಿಗಳಾಗಿ ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಜೂಡ್ ಮಂಗಳ್ ರಾಜ್, ಅಂತರಾಷ್ಟ್ರೀಯ ಜನರಲ್ ಕೌನ್ಸಿಸ್ ವಿಶೇಷ ಒಂಬುಡ್ಸ್ ಮನ್ ಜೋಸೆಫ್ ಪಾಂಡ್ಯನ್, ಫಾದರ್ ಮುಲ್ಲರ್ಸ್ ಸಂಸ್ಥೆಗಳ ನಿರ್ದೇಶಕರಾದ ವಂ|ಫಾವುಸ್ತಿನ್ ಲೂಕಾಸ್ ಲೋಬೊ, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಸಾಂತಿಗೂ ಮಾನಿಕ್ಯಮ್, ಸಂಯೋಜಕರಾದ ಆಶಾ ವಾಜ್, ಯುವ ಪ್ರತಿನಿಧಿ ಆಲಿಸ್ಟರ್ ನಜರೆತ್, ಸೈಂಟ್ ವಿನ್ಸೆಂಟ್ ದಿ ಪಾವ್ಲ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಗ್ಯಾಬ್ರಿಯಲ್ ಜೋ ಕುವೆಲ್ಲೊ, ಆಧ್ಯಾತ್ಮಿಕ ನಿರ್ದೇಶಕರಾದ ವಂ. ಫ್ಲೇವಿಯಾನ್ ಲೋಬೊ, ಕಾರ್ಯದರ್ಶಿ ಲಿಗೋರಿ ಫೆರ್ನಾಂಡಿಸ್, ಕೋಶಾಧಿಕಾರಿ ಕ್ಲಾರೆನ್ಸ್ ಮಚಾದೊ, ಸಂಚಾಲಕರಾದ ಫಿಲೋಮಿನಾ ಮಿನೇಜಸ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಯೋಜನೆ ಆರಂಭವಾಗಿದ್ದು ಕಿಡ್ನಿ ಡಯಾಲಿಸ್ ಪ್ರಯೋಜನವನ್ನು ರೋಗಿಗಳು ಪಡೆಯುತ್ತಿದ್ದಾರೆ. ದಕ ಜಿಲ್ಲಾ ವ್ಯಾಪ್ತಿಯಲ್ಲಿ ಡಯಾಲಿಸಿಸ್ ಅಗತ್ಯವಿರುವ ಬಡ ರೋಗಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆ ಎಲ್ಲಾ ಧರ್ಮ ಮತ್ತು ವರ್ಗದವರಿಗೂ ಕೂಡ ಲಭ್ಯವಾಗಿದ್ದು ಸ್ಥಳೀಯ ಚರ್ಚಿನ ವಿನ್ಸೆಂಟ್ ದಿ ಪೌಲ್ ಘಟಕದ ಶಿಫಾರಸು ಅರ್ಜಿಯೊಂದಿಗೆ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದೆ. ಡಯಾಲಿಸಿಸ್ ರೋಗಿಗಳಿಗೆ ಯೋಜನೆಗೆ ನೊಂದಣಿಯಾದ ಬಳಿಕ ಅಧಿಕೃತ ಗುರುತು ಪತ್ರ ನೀಡಲಾಗುತ್ತಿದ್ದು ಅದರ ಆಧಾರದಲ್ಲಿ ನಿರಂತರವಾಗಿ 50% ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದೆ. ಡಯಾಲಿಸಿಸ್ ಸೇವೆಗೆ ತಗುಲುವ 50% ವೆಚ್ಚವನ್ನು ರೋಗಿಗಳು ಭರಿಸಬೇಕಾಗಿದ್ದು ಉಳಿದ 50% ವೆಚ್ಚವನ್ನು ಜೋಸೆಫ್ ಮಿನೇಜಸ್ ಮತ್ತು ಅವರ ತಂಡ ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆ ಮುಖಾಂತರ ಆಸ್ಪತ್ರೆಗಳಿಗೆ ಭರಿಸಲಿದೆ.
ಜೋಸೆಫ್ ಮಿನೇಜಸ್ ಮತ್ತು ಕುಟುಂಬ ಕುಟುಂಬದ ವತಿಯಿಂದ ಈಗಾಗಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಸಹಾಯಕರಿಗೆ ಕಳೆದ ಹಲವಾರು ವರುಷಗಳಿಂದ ವಿವಿಧ ದಾನಿಗಳ ಸಹಕಾರದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ನೀಡುವ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಮನ್ನಾ ಯೋಜನೆಯ ಮುಂದಿನ 100 ವರ್ಷಗಳ ಕಾಲ ಸಂಪೂರ್ಣ ವೆಚ್ಚವನ್ನು ನಿರ್ವಹಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದ್ದು ಈಗ ಮತ್ತೊಂದು ಜನಪರ ಯೋಜನೆಗೆ ಮುಂದಾಗಿದೆ.