ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ; ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಸಾವು, ಇನ್ನಿಬ್ಬರು ಅಪಾಯದಿಂದ ಪಾರು
ಮಂಗಳೂರು: ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾದ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ನಗರದ ಕರಂಗಲ್ಪಾಡಿಯಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಘಟನೆ ನಡೆದಿದ್ದು ಕೋರ್ಟ್ ರಸ್ತೆಯಿಂದ ಬರುತ್ತಿದ್ದ ಗೂಡ್ಸ್ ಆಟೋ ರಿಕ್ಷಾ ನೇರವಾಗಿ ಬಂದು ಕರಂಗಲ್ಪಾಡಿ ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಗೆ ತಿರುವು ಪಡೆಯುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಕಾರನ್ನು ಸ್ವತಃ ನ್ಯಾಯಾಧೀಶ ವಿನಯ್ ಅವರು ಚಲಾಯಿಸುತ್ತಿದ್ದರು.
ಆಟೋ ಗೂಡ್ಸ್ ಕಾರಿಗೆ ಡಿಕ್ಕಿಯಾಗಿ ಪಲ್ಟಿಯಾಗಿ ಬಿದ್ದಿದೆ. ಅದರ ಚಾಲಕ ಚಂದ್ರ ಕೆ. (69) ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಬಳಿಕ 12 ಗಂಟೆ ವೇಳೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನ್ಯಾಯಾಧೀಶ ವಿನಯ್ ಅವರಿಗೂ ಕೈಗೆ ಗಾಯವಾಗಿದೆ. ಗೂಡ್ಸ್ ಆಟೋ ಪಲ್ಟಿಯಾದ ವೇಳೆ ಅಲ್ಲಿಯೇ ಇದ್ದ ಸ್ಕೂಟರಿಗೆ ತಾಗಿದ್ದು ಅದರ ಸವಾರ ಪ್ಲೇವಿಯರ್ (51) ರಸ್ತೆಗೆ ಬಿದ್ದು ಅವರಿಗೂ ಗಾಯವಾಗಿದೆ.
ವಿನಯ್ ಅವರ ದೂರಿನಂತೆ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರ ಅವರು ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿಯಾಗಿದ್ದು ಮಂಗಳೂರಿನಲ್ಲಿ ಕಲ್ಪನಾ ಸ್ವೀಟ್ಸ್ ಶಾಪ್ ಗೆ ಸೇರಿದ ಗೂಡ್ಸ್ ಆಟೋದಲ್ಲಿ ಚಾಲಕರಾಗಿದ್ದರು. ಅಪಘಾತ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆಟೋ ನೇರವಾಗಿ ಬಂದು ಕಾರಿಗೆ ಡಿಕ್ಕಿಯಾಗಿದ್ದು ಕಂಡುಬಂದಿದೆ. ಹೀಗಾಗಿ ಆಟೋ ಚಾಲಕ ಕಣ್ಣು ಮಂಜಾಗಿ ಅಥವಾ ಏನಾದ್ರೂ ಸಮಸ್ಯೆ ಉಂಟಾಗಿ ಕಾರಿಗೆ ಡಿಕ್ಕಿಯಾಗಿರುವ ಸಾಧ್ಯತೆಯಿದೆ. ಸ್ವಲ್ಪನಾದ್ರೂ ಬ್ರೇಕ್ ಹಾಕುತ್ತಿದ್ದರೆ ಆಟೋ ಮುಂಭಾಗ ಅಪ್ಪಚ್ಚಿ ಆಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
