ದಕ್ಷಿಣ ಕನ್ನಡ ಕೆಡಿಪಿ ಸಭೆಯಲ್ಲಿ ಹೈಡ್ರಾಮಾ: ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿರುದ್ಧ ಬಿಜೆಪಿ ಶಾಸಕರ ಆಕ್ರೋಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಭೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಸಭೆಯಲ್ಲಿ ವಿವಿಧ ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುವಂತೆ ಸಚಿವ ಯು.ಟಿ. ಖಾದರ್ ಸೂಚಿಸಿದರು. ಈ ವೇಳೆ ಬಿಜೆಪಿ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, “ಗಂಭೀರ ಸಮಸ್ಯೆಗಳಿವೆ. ಅದರ ಬಗ್ಗೆ ಚರ್ಚೆ ಮಾಡೋಣ. ಮಕ್ಕಳಾಟಿಕೆ ಮಾಡಬೇಡಿ,” ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರಿಗೆ ತಾಕೀತು ಮಾಡಿದರು.
ಸಚಿವರ ಈ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಭ್ರಷ್ಟಾಚಾರದ ಆರೋಪಗಳನ್ನು ಪ್ರಸ್ತಾಪಿಸುತ್ತಿರುವ ಸಂದರ್ಭದಲ್ಲಿ ಅದನ್ನು “ಮಕ್ಕಳಾಟಿಕೆ” ಎಂದು ಹೇಗೆ ಹೇಳುತ್ತೀರಿ ಎಂದು ಬಿಜೆಪಿ ಶಾಸಕರು ಪ್ರಶ್ನಿಸಿದರು.
ಈ ವೇಳೆ ಶಾಸಕ ಭರತ್ ಶೆಟ್ಟಿ ಅವರು ಸಚಿವ ಯು.ಟಿ. ಖಾದರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರದ ಆರೋಪಗಳಂತಹ ಗಂಭೀರ ವಿಷಯಗಳನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು ಹಾಗೂ ಬಿಜೆಪಿ ಶಾಸಕರ ನಡುವಿನ ವಾಗ್ವಾದದಿಂದ ಕೆಡಿಪಿ ಸಭೆಯಲ್ಲಿ ಕೆಲಕಾಲ ಹೈಡ್ರಾಮಾ ಸೃಷ್ಟಿಯಾಯಿತು.
