ಅನಧಿಕೃತ ಮರಳುಗಾರಿಕೆ ಅವಕಾಶವಿದೆ ಎಂದರೆ ಜಿಲ್ಲಾಡಳಿತ ಅಧಿಕೃತ ಪರವಾನಿಗೆದಾರರಿಗೆ ಯಾಕಿಲ್ಲ?
ಉಡುಪಿ: ಬ್ರಹ್ಮಾವರ ತಾಲೂಕು ಹೊಸಾಳ ಸಮೀಪದ ನಾಗರಮಠದಲ್ಲಿ ಜಿಲ್ಲಾಡಳಿತದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಅಧಿಕೃತ ಮರಳು ಬ್ಲಾಕ್ ಗುತ್ತಿಗೆ ಪಡೆದು ಮರಳುಗಾರಿಕೆ ಮಾಡಲು ಸ್ಥಳೀಯ ಕೆಲವೊಂದು ಸ್ವಹಿತಾಸಕ್ತಿ ಹೊಂದಿದ ವ್ಯಕ್ತಿಗಳಿಂದ ಅನ್ಯಾಯವಾಗುತ್ತಿದ್ದು ಕಳೆದ 3 ತಿಂಗಳಿನಿಂದ ಗುಂಪು ಕಟ್ಟಿಕೊಂಡು ಕೆಲವೊಂದು ಪಟ್ಟಭದ್ರ ಹಿತಾಸಕ್ತಿಯುಳ್ಳವರು ತೊಂದರೆ ನೀಡುತ್ತಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತ ಟೆಂಡರ್ ಪಡೆದ ಕುಶ ಕುಮಾರ್ ಆರೋಪಿಸಿದರು.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರಹ್ಮಾವರದ ನಾಗರಮಠದಲ್ಲಿ ಮರಳು ಬ್ಲಾಕ್ ಸಂಖ್ಯೆ ಡಿ ಎಸ್ ಬಿ 5 ರಂದಲ್ಲಿ ಮರಳುಗಾರಿಕೆ ಮಾಡಲು ಬಿ ಕುಶಕುಮಾರ್ ಎಂಬವರಿಗೆ ಜಿಲ್ಲಾಡಳಿತ ಅಧಿಕೃತ ಅನುಮತಿ ನೀಡಿದೆ. ಟೆಂಡರ್ ಅನುಮತಿ ಪಡೆದ ಬಳಿಕ ಸ್ಥಳೀಯ ಅನಧಿಕೃತವಾಗಿ ಮರಳುಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳು ಗುತ್ತಿಗೆದಾರರಿಗೆ ಅನಾವಶ್ಯಕವಾಗಿ ಹಣಕ್ಕಾಗಿ ಒತ್ತಡ ಹೇರುತ್ತಿದ್ದು ಇದಕ್ಕೆ ಬಗ್ಗದ ಗುತ್ತಿಗೆದಾರರಿಗೆ ಸ್ಥಳೀಯ ಕೆಲವೊಂದು ವ್ಯಕ್ತಿಗಳಿಗೆ ಸುಳ್ಳು ಮಾಹಿತಿ ನೀಡಿ ಅಧಿಕೃತ ಗುತ್ತಿಗೆದಾರರ ವಿರುದ್ದ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಮರಳುಗಾರಿಕೆ ಮಾಡಿದರೆ ಕೃಷಿ ಭೂಮಿಗೆ ತೊಂದರೆಯಾಗುತ್ತದೆ ಅಲ್ಲದೆ ನದಿ ಕೊರೆತ ಆಗುತ್ತದೆ ಎನ್ನುವು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾಧ್ಯಮಗಳಿಗೆ, ಸ್ಥಳೀಯರಿಗೆ ಸುಳ್ಳು ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸರ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ.
ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿರುವ ದಿನೇಶ್ ಗಾಣಿಗ ಮತ್ತು ಚಂದ್ರ ಕಾಂಚನ್ ಎಂಬವರು ತಮ್ಮ ಸ್ವಾರ್ಥ ಸಾಧನೆಗೆ ಮುಗ್ದ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಹಿಂದೆ ನದಿಯಲ್ಲಿ ಮರಳಿನ ಹೂಳು ತುಂಬಿದ್ದು ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನೆ ಮಾಡಿದವರು ಈಗ ಕಾನೂನು ಬದ್ಧ ಮರುಳುಗಾರಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ಹೇಳುವಂತೆ ಯಾವುದೇ ರೀತಿಯ ಅಕ್ರಮಗಳು ಇಲ್ಲಿ ನಡೆದಿಲ್ಲ ಕಾನೂನು ಬದ್ಧವಾದ ಸರ್ವೆ ನಡೆಸಿದ ಬಳಿಕವೇ ಜಿಲ್ಲಾಡಳಿತ ಕುಶ ಅವರಿಗೆ ಪರವಾನಿಗೆ ನೀಡಿದ್ದು ಸುದ್ದಿಗೋಷ್ಠಿಯಲ್ಲಿ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಪ್ಪು ಸರ್ವೆ ನಂಬರ್ ನೀಡಿ ಗುತ್ತಿಗೆ ಪಡೆಯಲಾಗಿದೆ ಎಂದು ಆರೋಪ ಮಾಡಿದ್ದು ಮರಳಿನ ಟೆಂಡರ್ ಪ್ರಕ್ರಿಯೆ ಈ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ನಡೆಯುವುದು ಮತ್ತು ಇದರಲ್ಲಿ ಸೂಕ್ತ ಸರ್ವೆ ನೀಡಿಯೇ ನೊಂದಾಯಿಸಿಕೊಂಡಿದ್ದು ಅವರ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ.
ಪ್ರಸ್ತುತ ಸ್ಯಾಂಡ್ ಬ್ಲಾಕ್ ಗುತ್ತಿಗೆ ನೀಡಿರುವ ಸ್ಥಳದಲ್ಲಿ ದೊಡ್ಡ ಮಟ್ಟದ ಮರಳು ದಿಬ್ಬ ರಚನೆಯಾಗಿದ್ದು ಇದನ್ನು ತೆರವು ಮಾಡದೆ ಹೋದರೆ ತೆಕ್ಕಟ್ಟೆ, ಚಿತ್ರಪಾಡಿ, ಬನ್ನಾಡಿ, ಗಿಳಿಯಾರು ನಾಗರಮಠ ಪರಿಸರದ ಕೃಷಿ ಭೂಮಿಯಲ್ಲಿ ನೀರು ನಿಂತು ತೊಂದರೆ ಆಗುತ್ತದೆ. ನದಿಯ ಮದ್ಯ ಮರಳು ದಿಬ್ಬ ಏರ್ಪಟ್ಟ ಹಿನ್ನಲೆಯಲ್ಲಿ ನದಿ ಇಬ್ಬಾಗವಾಗಿ ಹರಿಯುತ್ತಿದ್ದು ಇದರಿಂದ ನದಿದಂಡೆ ಕೊಚ್ಚಿಕೊಂಡು ಹೋಗುತ್ತಿದೆ ಆದ್ದರಿಂದ ಮರಳು ದಿಬ್ಬ ತೆರವುಗೊಳಿಸುವುದು ಅನಿವಾರ್ಯವಾಗಿದೆ.ಅದೇ ಉದ್ದೇಶದಿಂದ ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತ ಟೆಂಡರ್ ಪ್ರಕ್ರಿಯೆ ನಡೆಸಿದ್ದು ಇದರಲ್ಲಿ ಕುಶಕುಮಾರ್ ಎಂಬವರು ಭಾಗವಹಿಸಿ ಅದರ ಗುತ್ತಿಗೆಯನ್ನು ಕಾನೂನು ಪ್ರಕಾರವೇ ಪಡೆದುಕೊಂಡಿದ್ದರೂ ಕೂಡ ಸ್ಥಳಿಯ ಕೆಲವರು ವಿನಾಕಾರಣ ಸಮಸ್ಯೆ ಮಾಡುತ್ತಿದ್ದಾರೆ. ಈ ಹಿಂದೆ ಕಾರ್ಕಡ ಭಾಗದಲ್ಲಿ ಕೂಡ ಮರಳುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೋರಾಟಗಾರರು ಎನ್ನುವ ವ್ಯಕ್ತಿಗಳು ಸೇರಿಕೊಂಡು ಸುಳ್ಳು ಮಾಹಿತಿ ನೀಡಿ ಸ್ಥಳೀಯ ಜನರನ್ನು ಎತ್ತಿಕಟ್ಟಿ ಸಮಸ್ಯೆಗಳನ್ನು ಸೃಷ್ಠಿಸಿದ್ದರು.
ಅಲ್ಲದೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದೇವೆ ಎಂಬ ಆರೋಪ ಹೊತ್ತು ನಮ್ಮ ವಿರುದ್ದ ಚೆನ್ನೈ ಹಸಿರು ಪೀಠಕ್ಕೆ ಇದೇ ವ್ಯಕ್ತಿಗಳು ದೂರು ದಾಖಲಿಸಿದ್ದು ವಿಚಾರಣೆ ನಡೆಸಿದ ಹಸಿರುಪೀಠ ಇವರ ವಾದದಲ್ಲಿ ಹುರುಳಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ. ಮರಳುಗಾರಿಕೆಗೆ ತಡೆ ನೀಡಲು ಕೋರಿ ಹೈಕೋರ್ಟ್ ನಲ್ಲಿ ಮೂರು ಬಾರಿ ವಾದ ನಡೆದರೂ ನ್ಯಾಯಾಲಯ ಯಾವುದೇ ರೀತಿಯ ತಡೆ ನೀಡಿಲ್ಲ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ಮರಳುಗಾರಿಕೆಯಿಂದ ತಮ್ಮ ಜಾಗ ನದಿಯಲ್ಲಿದೆ ಎಂದು ಆರೋಪಿಸುವವರಿಗೆ ಈಗಾಗಲೇ ತಹಶೀಲ್ದಾರ ಅವರು ಅಂತಹ ದೂರುಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹದ್ದುಬಸ್ತಿಗೆ ಹಾಕಲು ಮನವಿ ಸಲ್ಲಿಸುವಂತೆ ತಿಳಿಸಿರುತ್ತಾರೆ ಆದರೆ ಈ ವರೆಗೆ ಅಂತಹ ಯಾವುದೇ ಕೆಲಸ ಆರೋಪ ಮಾಡಿರುವವರಿಂದ ನಡೆದಿಲ್ಲ. ಕೇವಲ ವೈಯುಕ್ತಿಕ ಹೊಟ್ಟೆ ಉರಿಗಾಗಿ ಅನಗತ್ಯ ಕಿರುಕಳ ನೀಡುತ್ತಿದ್ದಾರೆ. ನದಿ ದಂಡೆ ಸವೆತ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಮಾನ್ಯ ಕುಂದಾಪುರ ಶಾಸಕರು ರೂ 3 ಕೋಟಿ ಅನುದಾವನ್ನು ತಡೆಗೋಡೆ ನಿರ್ಮಾಣಕ್ಕಾಗಿ ಮೀಸಲಿರಿಸಿದ್ದಾರೆ. ನದಿಯಲ್ಲಿ ಲೆಕ್ಕಕ್ಕಿಂತ ಹೆಚ್ಚಿನ ಹೂಳು ತುಂಬಿದ್ದರೆ ಇದರಿಂದ ಸಮೀಪದಲ್ಲಿರುವ ಅಣೆಕಟ್ಟಿಗೆ ತೊಂದರೆ ಉಂಟಾಗುತ್ತದೆ ಎಂಬ ವಿಚಾರವನ್ನು ತಜ್ಞರೇ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮರಳುಗಾರಿಕೆ ಮಾಡುವ ಸ್ಥಳದ ಗುರುತನ್ನು ಎನ್ ಐ ಟಿಕೆಯಿಂದ ಸರ್ವೆ ಮಾಡಿದ ಬಳಿಕವೇ ಗುರುತಿಸಲಾಗಿದೆ. ನದಿಯಲ್ಲಿ ಹೂಳು ತುಂಬಿ ಈಗಾಗಲೇ ಕೋಟ, ಬಾರ್ಕೂರು ಭಾಗದ ಪ್ರದೇಶಗಳು ಮುಳುಗಡೆಯಾಗುತ್ತಿರುವ ಕುರಿತು ಮತ್ತು ಇದರಿಂದ ಸಮಸ್ಯೆಯಾಗುತ್ತಿರುವ ಕುರಿತು ರೈತರು ಸೇರಿಕೊಂಡು ಪ್ರತಿಭಟನೆ ನಡೆಸಿರುವುದು ಕೂಡ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ವಿಪರ್ಯಾಸದ ಸಂಗತಿಯೆಂದರೆ ಮರಳು ತೆಗೆಯಬಾರದು ಎಂದು ಹೇಳಿ ಪ್ರತಿಭಟನೆ ಮಾಡುವ ವ್ಯಕ್ತಿಗಳು ಅನಧಿಕೃತವಾಗಿ ರಾತ್ರಿಹೊತ್ತು ಅದೇ ಮರಳು ದಿಬ್ಬದಿಂದ ಮರಳನ್ನು ತೆರವುಗೊಳಸಿ ಬೆರೊಂದು ಕಡೆ ರಾಶಿ ಹಾಕಿ ಅದನ್ನು ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದು ಇದಕ್ಕೆ ಸಂಬಂಧಿಸಿದ ಪೂರ್ಣ ದಾಖಲೆಗಳನ್ನು ನಮ್ಮಲ್ಲಿ ಇದೆ. ಇಲ್ಲಿ ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿಗಳ ಒಂದು ತುಂಡು ಭೂಮಿ ಕೂಡ ಈ ಭಾಗದಲ್ಲಿ ಇಲ್ಲದೆ ಇದ್ದರೂ ಉದ್ದೇಶಪೂರ್ವಕವಾಗಿ ಅಧಿಕೃತ ಗುತ್ತಿಗೆದಾರರಿಗೆ ತೊಂದರೆ ನೀಡಬೇಕು ಎನ್ನುವುದು ಅನಧಿಕೃತ ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳ ಹುನ್ನಾರವಾಗಿದೆ.
ಅನಧಿಕೃತ ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳ ವಿಪರೀತ ಉಪಟಳದ ಪರಿಣಾಮವಾಗಿ ಪೊಲೀಸ್ ಭದ್ರತೆಯಲ್ಲಿ ಮರಳನ್ನು ತೆಗೆದು ಸೂಕ್ತ ರಾಜಧನವನ್ನು ಪಾವತಿ ಮಾಡಿಕೊಂಡು ಜಿಲ್ಲಾಡಳಿತದ ನಿಯಮಗಳಿಗೆ ಬದ್ದವಾಗಿ ಮರಳು ತೆಗೆಯುವ ಪರಿಸ್ಥಿತಿ ಅಧಿಕೃತ ಗುತ್ತಿಗೆದಾರರಿಗೆ ಒದಗಿಬಂದಿದೆ. ಯಾರನ್ನೋ ಬೆದರಿಸುವ ಉದ್ದೇಶದಿಂದ ಪೊಲೀಸ್ ಭದ್ರತೆಯಲ್ಲಿ ಮರಳು ತೆಗೆಯಲು ಆರಂಭಿಸಿಲ್ಲ ಬದಲಾಗಿ ನ್ಯಾಯಯುತವಾಗಿ ಮರಳು ತೆಗೆಯುವ ಸಂದರ್ಭದಲ್ಲಿ ವಿನಾಕಾರಣ ಮಹಿಳೆಯರನ್ನು ಮುಂದೆ ಛೂಬಿಟ್ಟು ಸಮಸ್ಯೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಎರಡು ಮೂರು ಬಾರಿ ನಮ್ಮ ಮರಳು ವಾಹನಗಳನ್ನು ವಿನಾಕಾರಣ ಅಡ್ಡ ಹಾಕಿ ನಮ್ಮ ವಾಹನಗಳ ಚಾಲಕರಿಗೆ ಹಲ್ಲೆ ನಡೆಸುವಂತ ಪ್ರಯತ್ನ ಕೂಡ ನಡೆಸಿ ಬಳಿಕ ಸುಳ್ಳು ದೂರು ದಾಖಲಿಸಿದ ಘಟನೆ ನಡೆದಿದೆ. ಆದ್ದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸದಿರಲಿ ಎಂಬ ಮುಂಜಾಗ್ರತೆಯಿಂದ ಪೊಲೀಸ್ ಭದ್ರತೆ ಪಡೆಯಲಾಗಿದೆ.
ಈಗಾಗಲೇ ಸುಮಾರು 40ಕ್ಕೂ ಅಧಿಕ ಉತ್ತರ ಭಾರತದ ಕಾರ್ಮಿಕರನ್ನು ಮೂರು ತಿಂಗಳಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ವೃತಾ ಅವರ ಖರ್ಚುವೆಚ್ಚಗಳನ್ನು ಭರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅನಧಿಕೃತ ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಈಗಾಗಲೇ ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲಿನ ಸಮಸ್ಯೆಯಿಂದ ಎಲ್ಲಾ ರೀತಿಯ ಕಟ್ಟಡ ಸಂಬಂಧಿತ ಕೆಲಸಗಳು ನಿಂತಿವೆ. ಮರಳು ಸಿಕ್ಕಿಲ್ಲ ಎಂದರೆ ಬಡವರು ಮನೆಕಟ್ಟಲು ಪರದಾಡುವ ಪರಿಸ್ಥಿತಿ ಉಂಟಾಗಲಿದೆ. ಮರಳುಗಾರಿಕೆಗೆ ಸಮಸ್ಯೆಯಾದರೆ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಏಟು ಬೀಳಲಿದ್ದು ಅದೆಷ್ಟೋ ಗುತ್ತಿಗೆದಾರರು, ಕಾರ್ಮಿಕರು, ಮರಳು ಸಾಗಿಸುವ ವಾಹನ ಚಾಲಕರು ಮತ್ತು ಮ್ಹಾಲಕರು, ಹಾರ್ಡ್ ವೇರ್ ವ್ಯಾಪಾರಾಸ್ಥರು, ಕೂಲಿ ಕಾರ್ಮಿಕರು ಸಮಸ್ಯೆಗೆ ಅನುಭವಿಸಬೇಕಾಗುತ್ತದೆ. ಇನ್ನೊಂದು ತಿಂಗಳಿನಲ್ಲಿ ಮಳೆಗಾಲ ಆರಂಭವಾಗಲಿದ್ದು ಅದರ ಮೊದಲು ಜಿಲ್ಲಾಡಳಿತಅಧಿಕೃತವಾಗಿ ಟೆಂಡರ್ ನೀಡಿದ ಸ್ಥಳದಲ್ಲಿ ಕಾನೂನು ಬದ್ಧವಾಗಿ ಮರಳು ತೆಗೆಯಲು ಅವಕಾಶ ನೀಡದೆ ಹೋದಲ್ಲಿ ಜಿಲ್ಲೆಯ ಪರಿಸ್ಥೀತಿ ವೀಕೋಪಕ್ಕೆ ತಿರುಗಲಿದ್ದು ಎಲ್ಲಾ ವರ್ಗದ ಜನರಿಗೆ ಸಮಸ್ಯೆ ಉಂಟಾಗಲಿದೆ.
ಪ್ರಸ್ತುತ ತಾತ್ಕಾಲಿಕವಾಗಿ ಪೊಲೀಸರ ಭದ್ರತೆಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು ಇದು ಶಾಶ್ವತ ಪರಿಹಾರವಲ್ಲ ಅದರ ಬದಲು ಪೊಲೀಸ್ ಇಲಾಖೆ, ಜಿಲ್ಲಾಡಳಿತ ಅಧಿಕೃತ ಮರಳುಗಾರಿಕೆ ನಡೆಸಲು ತೊಂದರೆ ಉಂಟು ಮಾಡುತ್ತಿರುವವರ ವಿರುದ್ದ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿದ್ದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಗಳು ಎಚ್ಚೆತ್ತುಕೊಂಡು ಅಧಿಕೃತ ಮರಳುಗಾರಿಕೆ ಮಾಡುವ ವ್ಯಕ್ತಿಗಳ ನೆರವಿಗೆ ಬರಬೇಕಾಗಿದೆ. ಇದರೊಂದಿಗೆ ಶಾಸಕರು, ಸಂಸದರೂ ಕೂಡ ನ್ಯಾಯದ ಕಡೆಗೆ ನಿಲ್ಲಬೇಕಾಗಿದೆ. ಜಿಲ್ಲೆಯ ನಕಲಿ ಹೋರಾಟಗಾರರಿಗೆ ಕಾನೂನು ಸೂಕ್ತ ಕ್ರಮಕೈಗೊಳ್ಳ ಬೇಕು ಎನ್ನುವುದು ನಮ್ಮ ಪ್ರಮುಖ ಆಗ್ರಹವಾಗಿದೆ ಎಂದು ಹೇಳಿದರು.
