ಮಂಗಳೂರಿನ ಬೈಕಂಪಾಡಿಯಲ್ಲಿ ಅಕ್ರಮ ಗೋ ಸಾಗಾಟ ಪತ್ತೆ: 16 ಗೋವುಗಳ ರಕ್ಷಣೆ
ಮಂಗಳೂರು: ನಗರದ ಬೈಕಂಪಾಡಿ ಪರಿಸರದಲ್ಲಿ ಬುಧವಾರ ಮುಂಜಾನೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಿದ ಪಣಂಬೂರು ಪೊಲೀಸರು, ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿದ್ದ 16 ಗೋವುಗಳನ್ನು ರಕ್ಷಿಸಿದ್ದಾರೆ.
ಬಜರಂಗದಳದ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ KA-19-AB-2715 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಬೈಕಂಪಾಡಿ ಪರಿಸರದಲ್ಲಿ ಅಕ್ರಮ ಗೋ ಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಕಾರ್ಯಾಚರಣೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
