ಉಸ್ತುವಾರಿ ಸಚಿವರ ಅನುದಾನ ಬಿಡುಗಡೆ ಹೇಳಿಕೆ ಜನರ ದಾರಿ ತಪ್ಪಿಸುವ ಕೆಲಸ : ಪ್ರಭಾಕರ ಪೂಜಾರಿ – ದಿನೇಶ್ ಅಮೀನ್
ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪರ್ಯಾಯ ಮಹೋತ್ಸವದ ಅಂಗವಾಗಿ ರಸ್ತೆ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ರೂ. 5 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದಂತಾಗಿದೆ ಎಂದು ನಿಕಟ ಪೂರ್ವ ಉಡುಪಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ರವರು ಮತ್ತು ಉಡುಪಿ ಬಿಜೆಪಿ ನಗರ ಅಧ್ಯಕ್ಷರಾದ ದಿನೇಶ್ ಅಮೀನ್ ರವರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
ಕಳೆದ ಮೂರು- ನಾಲ್ಕು ವರ್ಷಗಳಿಂದ ಗಣಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನ ಮರಳು, ಕೆಂಪು ಕಲ್ಲು, ಶಿಲೆ ಕಲ್ಲುಗಳ ಬಳಕೆಗೆ ಸಂಬಂಧಿಸಿದಂತೆ ಪಾವತಿಸಿದ ತೆರಿಗೆ ಹಣ ಜಿಲ್ಲೆಗೆ ಸಂಬಂಧಿಸಿದ ಮೊತ್ತವಾಗಿರುತ್ತದೆ. ಸದ್ರಿ ಒಟ್ಟುಗೂಡಿದ ಹಣವು ಜಿಲ್ಲೆಯ ಅಭಿವೃದ್ಧಿಗೆ ಬಳಸಬೇಕಾಗಿರುತ್ತದೆ. ಜಿಲ್ಲೆಗೆ ಬಳಸಬೇಕಾದ ಸಾರ್ವಜನಿಕರ ತೆರಿಗೆ ಹಣವನ್ನು ರಾಜ್ಯ ಸರಕಾರದಿಂದ ಪರ್ಯಾಯ ಮಹೋತ್ಸವಕ್ಕೆ ಅನುದಾನ ಬಿಡುಗಡೆ ಮಾಡಿರುವುದಾಗಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿರುತ್ತಾರೆ. ಗಣಿ ಇಲಾಖೆಯಲ್ಲಿ ಒಟ್ಟಾದ 11 ಕೋಟಿ ರಾಜಧನದ ಪೈಕಿ ಉಡುಪಿ ಜಿಲ್ಲೆಯ ಇತರೆ ನಾಲ್ವರು ಶಾಸಕರುಗಳು ಬಿಟ್ಟುಕೊಡುವ ಮೂಲಕ ಸಹಕರಿಸಿರುವುದರಿಂದ ರೂ. 5 ಕೋಟಿ ಉಡುಪಿ ನಗರಕ್ಕೆ ಲಭಿಸಿದೆ.
ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಜಿಲ್ಲೆಯ ಶಾಸಕರುಗಳಾದ ಸುನೀಲ್ ಕುಮಾರ್, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಹಾಗೂ ಸುರೇಶ್ ಶೆಟ್ಟಿ ಗುರ್ಮೆ ಅವರ ಬಳಿ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ಸಹಕಾರ ನೀಡಿದ ಪರಿಣಾಮ ಉಡುಪಿ ನಗರಕ್ಕೆ ಈ ಅನುದಾನ ಒದಗಿಸಲಾಗಿದೆ.
ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜನರ ದಾರಿ ತಪ್ಪಿಸುವ ಕೆಲಸ ಬಿಟ್ಟು ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಅನುದಾನ ತಂದು ಲೋಕಾರ್ಪಣೆಗೊಳಿಸುವ ಕೆಲಸ ಮಾಡಲಿ. ಅಲ್ಲದೇ ಕಳೆದ ಮೂರು ವರ್ಷಗಳಿಂದ ತೀರಾ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಸ್ವಂತ ಖಜಾನೆಯಿಂದ ಅನುದಾನ ತರುವ ಬಗ್ಗೆ ಶ್ರಮಿಸಲಿ ಎಂದು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
