ಮಲ್ಪೆಯಲ್ಲಿ ಅಂದರ್–ಬಾಹರ್ ಜೂಜಾಟ: ಐವರ ಬಂಧನ
ಉಡುಪಿ: ಖಚಿತ ಮಾಹಿತಿಯ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ (ಎಲ್&ಓ) ಈರಣ್ಣ ಶಿರಗುಂಪಿ ಅವರು ಸಿಬ್ಬಂದಿಯವರೊಂದಿಗೆ ಫೆ. 13ರಂದು ರಾತ್ರಿ ಸುಮಾರು 10.50ಕ್ಕೆ ಉಡುಪಿ ತಾಲೂಕು ಕಡೆಕಾರು ಗ್ರಾಮದ ಸೀ ವ್ಯೂ ರೆಸಾರ್ಟ್ ಸಮೀಪ, ಕಡೆಕಾರ್ ಪಡುಕೆರೆ ಹೊಳೆಯ ಕಡುವಿನ ಬಾಗಿಲು ಬಳಿ ದಾಳಿ ನಡೆಸಿ ಅಂದರ್–ಬಾಹರ್ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಳ್ಳಾಲ ಅಂಬ್ಲಮೊಗರು ನಿವಾಸಿ ನಿತಿನ್ ರಾಜ್ (35), ಕಾಪು ಪಡು ಪಲಿಮಾರು ನಿವಾಸಿ ಸಚಿನ್ ಆರ್. ಶೆಟ್ಟಿ (35), ಮಂಗಳೂರು ಕಂಕನಾಡಿ ನಿವಾಸಿ ಸತೀಶ್ @ ಕಿಶೋರ್ (38), ಸುರತ್ಕಲ್ ತಡಂಬೈಲು ನಿವಾಸಿ ರಂಜಿತ್ ಕೆ. ಅಮೀನ್ (39), ಮತ್ತು ಸುರತ್ಕಲ್ ಸದಾಶಿವ ನಗರ ನಿವಾಸಿ ರವಿ (36) ಎಂದು ಗುರುತಿಸಲಾಗಿದ್ದು ಪರಾರಿಯಾದ ವ್ಯಕ್ತಿ ಉದ್ಯಾವರದ ಕಿಶೋರ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಸಾರ್ವಜನಿಕ ಸ್ಥಳದಲ್ಲಿರುವ ಹಳೆಯ ತಂಗುದಾಣದಲ್ಲಿ 5–6 ಮಂದಿ ಮೊಬೈಲ್ ಫೋನ್ ಬೆಳಕಿನ ಸಹಾಯದಿಂದ ನ್ಯೂಸ್ಪೇಪರ್ ಹಾಸಿಕೊಂಡು ಅಂದರ್–ಬಾಹರ್ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದು ಕಂಡುಬಂದಿತು. ರಾತ್ರಿ 11 ಗಂಟೆಗೆ ದಾಳಿ ನಡೆಸಿದಾಗ ಓರ್ವ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದು, ಉಳಿದ ಐವರನ್ನು ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ.
ಸ್ಥಳದಿಂದ ಜೂಜಾಟಕ್ಕೆ ಬಳಸಿದ್ದ ವಸ್ತುಗಳು ಹಾಗೂ ಒಟ್ಟು ₹4,90,920 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಬೆಳಕಿಗೆ ಬಳಸಿದ 4 ಮೊಬೈಲ್ ಫೋನ್ಗಳು, ಒಂದು ಪವರ್ ಬ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಕೆಎ-47 ಪಿ-0047 ಸಂಖ್ಯೆಯ ಟೊಯೋಟಾ ಫಾರ್ಚ್ಯೂನರ್ ಕಾರು (ಅಂದಾಜು ಮೌಲ್ಯ ₹30 ಲಕ್ಷ) ಮತ್ತು ಕೆಎ-19 ಎಂಎಂ-8550 ಸಂಖ್ಯೆಯ ಮಾರುತಿ ಸುಜುಕಿ ಸ್ವಿಫ್ಟ್ ಕಾರು (ಅಂದಾಜು ಮೌಲ್ಯ ₹4 ಲಕ್ಷ)ಗಳನ್ನು ಪಂಚರ ಸಮಕ್ಷಮದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2026ರಂತೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 112 ಹಾಗೂ ಕೆಪಿ ಕಾಯ್ದೆ ಕಲಂ 87ರಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಐವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
