ಸಂಸತ್ ಆವರಣದಲ್ಲಿ ಸನಾತನ ಸಂಸ್ಕೃತಿಗೆ ಅಪಮಾನ: ಕಾಂಗ್ರೆಸ್ ಪಕ್ಷವನ್ನು ಹಿಂದೂ ಸಮಾಜ ಸಂಪೂರ್ಣ ತಿರಸ್ಕರಿಸಬೇಕು – ವಿಶ್ವ ಹಿಂದೂ ಪರಿಷತ್
ಮಂಗಳೂರು: ದೆಹಲಿಯ ಸಂಸತ್ ಆವರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಸಾಧು-ಸಂತರ ವೇಷ ಧರಿಸಿ ಕಾವಿ ವಸ್ತ್ರವನ್ನು ಅಣಕಿಸಿರುವ ಘಟನೆ ಸನಾತನ ಧರ್ಮ, ಸನಾತನ ಸಂಸ್ಕೃತಿ ಹಾಗೂ ಇಡೀ ಹಿಂದೂ ಸಮಾಜಕ್ಕೆ ಮಾಡಿದ ಘೋರ ಅಪಚಾರವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತ್ಯಾಗ ಮತ್ತು ಪವಿತ್ರತೆಯ ಸಂಕೇತವಾದ ಕಾವಿ ವಸ್ತ್ರವನ್ನು ರಾಜಕೀಯ ಉದ್ದೇಶಕ್ಕಾಗಿ ಅಣಕಿಸಿರುವುದು ಖಂಡನೀಯ. ಇತರ ಧರ್ಮಗಳ ಧರ್ಮಗುರುಗಳ ವೇಷ ಧರಿಸಿ ಇದೇ ರೀತಿಯ ಪ್ರದರ್ಶನ ಮಾಡುವ ಧೈರ್ಯ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಸಮಾಜದ ತಾಳ್ಮೆಯನ್ನು ದುರುಪಯೋಗಪಡಿಸಿಕೊಂಡು ಸನಾತನ ಧರ್ಮ ಹಾಗೂ ಪೂಜ್ಯ ಸಾಧು-ಸಂತರನ್ನು ನಿರಂತರವಾಗಿ ಅವಹೇಳನ ಮಾಡುವುದೇ ಕಾಂಗ್ರೆಸ್‌ನ ಪ್ರಮುಖ ಚಟುವಟಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಕಾವಿ ವಸ್ತ್ರ ಧರಿಸಿ ನಾಟಕವಾಡಿ ಪವಿತ್ರ ಸಂಸ್ಕೃತಿಗೆ ಅಪಮಾನ ಎಸಗಿರುವ ರಾಹುಲ್ ಗಾಂಧಿ ಹಾಗೂ ಪಪ್ಪು ಯಾದವ್ ಅವರು ದೇಶದ ಸಾಧು-ಸಂತರು ಮತ್ತು ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಸನಾತನ ಧರ್ಮದ ವಿರುದ್ಧ ನಿರಂತರವಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್‌ನ ಹಿಂದೂ ವಿರೋಧಿ ಮನೋಭಾವವೇ ಮುಂದಿನ ದಿನಗಳಲ್ಲಿ ಪಕ್ಷದ ಅವನತಿಗೆ ಕಾರಣವಾಗಲಿದೆ ಎಂದು ಟೀಕಿಸಿರುವ ಅವರು, ಇಂತಹ ಧರ್ಮದ್ರೋಹಿ ಹಾಗೂ ಅಪಮಾನಕಾರಿ ನಡೆಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ದೇಶದ ಹಿಂದೂ ಸಮಾಜ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
