ಜಪ್ಪಿನಮೊಗರು: ಪಾದಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಸ್ ವಶಕ್ಕೆ
ಮಂಗಳೂರು: ಜಪ್ಪಿನಮೊಗರು ಬಳಿ ಪಾದಚಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ‘ಶ್ರೀ ಕಟೀಲ್’ ಹೆಸರಿನ ಖಾಸಗಿ ಬಸ್ಸನ್ನು ಮಂಗಳೂರು ಸಂಚಾರ ದಕ್ಷಿಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ವೇಳೆ ಬಸ್ಸನ್ನು ಚಲಾಯಿಸುತ್ತಿದ್ದ ಚಾಲಕನ ಕುರಿತು ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕಾಸರಗೋಡು ನಿವಾಸಿ ಸುಂದರ ಅವರ ಪುತ್ರ ಸುಧೀರ್ ಕೆ. (40) ಅಪಘಾತದ ವೇಳೆ ಬಸ್ಸನ್ನು ಚಲಾಯಿಸುತ್ತಿದ್ದರೆಂದು ಸಿಸಿಟಿವಿ ದೃಶ್ಯಾವಳಿ ಹಾಗೂ ಪ್ರಯಾಣಿಕರು ನೀಡಿದ ಮಾಹಿತಿಯಿಂದ ಪ್ರಾಥಮಿಕವಾಗಿ ತಿಳಿದುಬಂದಿದೆ. ಅವರ ಚಾಲನಾ ಪರವಾನಗಿ ಚಾಲ್ತಿಯಲ್ಲಿರುವುದೂ ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 22ರಂದು ರಾತ್ರಿ ಸುಮಾರು 7.50ಕ್ಕೆ ಜಪ್ಪಿನಮೊಗರು ಎ.ಕೆ. ಲಾಡ್ಜ್ ಎದುರು, ಮಹಾಕಾಳಿ ಪಡ್ಪು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ–66ರ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 30ರಿಂದ 35 ವರ್ಷ ವಯಸ್ಸಿನ ಅಪರಿಚಿತ ಯುವಕನಿಗೆ ಬಸ್ ಡಿಕ್ಕಿ ಹೊಡೆದಿತ್ತು. ಬಳಿಕ ಬಸ್ಸನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಲಾಗಿತ್ತು.
ಡಿಕ್ಕಿಯ ರಭಸಕ್ಕೆ ರಸ್ತೆ ಬದಿಯಲ್ಲಿ ಬಿದ್ದ ಯುವಕನ ತಲೆಗೆ ತೀವ್ರ ರಕ್ತಗಾಯವಾಗಿತ್ತು. ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದರು.
ಈ ಸಂಬಂಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 285/2026ರಂತೆ ಬಿಎನ್ಎಸ್ ಕಲಂ 281, 106(1) ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 134(ಎ) ಮತ್ತು (ಬಿ) ಅಡಿ ಪ್ರಕರಣ ದಾಖಲಾಗಿದೆ.
ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಅಪಘಾತದಲ್ಲಿ ಭಾಗಿಯಾಗಿದ್ದು 42ನೇ ರೂಟ್ನಲ್ಲಿ ಸಂಚರಿಸುವ ‘ಶ್ರೀ ಕಟೀಲ್’ ಹೆಸರಿನ ಕೆಎ–19–ಎಎ–8499 ನೋಂದಣಿ ಸಂಖ್ಯೆಯ ಬಸ್ ಎಂಬುದನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಚಾಲಕ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾಕ್ಷಿಗಳ ಮೊಬೈಲ್ ಲೊಕೇಶನ್ ವಿವರಗಳು ಸೇರಿದಂತೆ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಎಲ್ಲ ಆಯಾಮಗಳಿಂದ ಮುಂದಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
