ಕಡಬ | ಕೋವಿಯಿಂದ ಗುಂಡು ಹಾರಿಸಿಕೊಂಡು ಬಾಲಕ ಮೃತ್ಯು; ತಂದೆ ಗಂಭೀರ ಸ್ಥಿತಿ
ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಕೋವಿಯಿಂದ ಗುಂಡು ತಗುಲಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತ ಬಾಲಕನ ತಂದೆಯೂ ಚೂರಿಯಿಂದ ಇರಿತಗೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತ ಬಾಲಕನನ್ನು ರಾಮಕುಂಜ ನಿವಾಸಿ ವಸಂತ್ ಅಮೀನ್ ಅವರ ಪುತ್ರ ಮೋಕ್ಷ ಎಂದು ಗುರುತಿಸಲಾಗಿದೆ. ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಮನೆಯಲ್ಲಿ ತಂದೆ–ಮಗನ ನಡುವೆ ಕೌಟುಂಬಿಕ ಕಲಹದಿಂದಾಗಿ ಜಗಳ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ವೇಳೆ ಕೋವಿಯಿಂದ ಗುಂಡು ಹೊರಟು ಬಾಲಕನಿಗೆ ತಗುಲಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಗಲಾಟೆಯ ಸಂದರ್ಭದಲ್ಲೇ ತಂದೆ ವಸಂತ್ ಅಮೀನ್ ಅವರಿಗೆ ಚೂರಿ ಇರಿತದ ಗಾಯಗಳಾಗಿದ್ದು, ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನೇ ಕೋವಿಯಿಂದ ಗುಂಡು ಹಾರಿಸಿಕೊಂಡನೇ ಅಥವಾ ತಂದೆಯೇ ಗುಂಡು ಹಾರಿಸಿದ್ದಾರೆಯೇ ಎಂಬ ಕುರಿತು ಸ್ಪಷ್ಟತೆ ಇನ್ನೂ ಲಭ್ಯವಾಗಿಲ್ಲ. ಈ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟಿಸಿರುವುದರಿಂದ, ಬಾಲಕನ ಸಾವಿನ ನಿಖರ ಕಾರಣವನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಡಬ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.