ಕಲ್ಚರ್ಪೆ: 25 ಅಡಿ ಆಳದ ಬಾವಿಗೆ ಬಿದ್ದ ಕಾಡಾನೆ; ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ
ಕಲ್ಚರ್ಪೆ: ಆಳವಾದ ಪಾಳು ಬಾವಿಗೆ ಬಿದ್ದು ದಿಕ್ಕು ತೋಚದೆ ಅಸಹಾಯಕ ಸ್ಥಿತಿಯಲ್ಲಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಸೋಮವಾರ ನಡೆದಿದೆ.
ಸುಳ್ಯ ಸಮೀಪದ ಪೆರಾಜೆ ಬಳಿಯ ಕಲ್ಚರ್ಪೆಯಲ್ಲಿ ಅಂದಾಜು 20 ರಿಂದ 22 ವರ್ಷ ಪ್ರಾಯದ ಗಂಡಾನೆಯೊಂದು ರಾಮ ನಾಯ್ಕ ಅವರ ಅರಣ್ಯದಂಚಿನ ತೋಟದ ಬದಿಯಲ್ಲಿದ್ದ 25 ಅಡಿ ಆಳದ ಪಾಳು ಬಾವಿಗೆ ಭಾನುವಾರ ರಾತ್ರಿ 11.30ರ ವೇಳೆಗೆ ಬಿದ್ದಿದೆ. ಈ ವೇಳೆ ಕಾಡಾನೆಯ ರೋಧನೆಯನ್ನು ಕೇಳಿದ ರಾಮ ನಾಯ್ಕ ಅವರ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಿಬ್ಬಂದಿಗಳು ಬೆಳಿಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದರು.
ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಬೆಳಗ್ಗೆ 6 ಗಂಟೆಗೆ ಆನೆಯ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎಂಟು ಗಂಟೆಯಿಂದ ಹಿಟಾಚಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಬಾವಿಯ ಒಂದು ಬದಿಯಿಂದ ಆಳ ಮಾಡಿ ದಾರಿ ಮಾಡಿ ಕೊಡಲಾಯಿತು. ಮಧ್ಯಾಹ್ನ 12.50ರ ವೇಳೆಗೆ ಹಿಟಾಚಿ ತೋಡಿದ ದಾರಿಯ ಮೂಲಕ ಮೇಲಕ್ಕೆ ಬಂತ್ತು. ಸುಮಾರು 6 ರಿಂದ 7 ಗಂಟೆ ಕಾರ್ಯಾಚರಣೆ ಅರಣ್ಯ ಇಲಾಖೆ ನಡೆಸಿತ್ತು.
ಬಾವಿಯಿಂದ ಮೇಲೆದ್ದು ಬಂದ ಆನೆಯು ಮೇಲಕ್ಕೆ ಬಂದು ತೋಟದ ಮೇಲಿನ ಭಾಗದ ರಾಷ್ಟೀಯ ಹೆದ್ದಾರಿ ಕಡೆ ಓಡಿತ್ತು. ಇದರಿಂದ ಕೆಲ ಕಾಲ ಆತಂಕ ಸೃಷ್ಠಿಸಿತು. ಬಾವಿಯಿಂದ ಮೇಲೆ ಬಂದಾಗ ಎದುರಿಗಿದ್ದ ಹಿಟಾಚಿಗೆ ಹಾದು ಕೊಂಡು ಕೆಳ ಭಾಗಕ್ಕೆ ನುಗ್ಗಿತು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು ದೂರಕ್ಕೆ ಸರಿಸಿತು. ಕೆಲ ಕಾಲದ ಬಳಿಕ ತೋಟಕ್ಕೆ ತೆರಳಿ ಅದೇ ದಾರಿಯಾಗಿ ಬಂದ ಕಾಡಾನೆ ಬಳಿಕ ಹಿಂತಿರುಗಿ ಬಂದು ಪೂಮಲೆ ಕಾಡಿನತ್ತ ಸಾಗಿತ್ತು.
ಕಾರ್ಯಾಚರಣೆಯಲ್ಲಿ ಸಿಸಿಎಫ್ ಕರಿಕಾಳನ್, ಡಿಎಫ್‍ಒ ಅಂಥೋನಿ ಮರಿಯಪ್ಪ, ಪ್ರೊಬೇಷನರಿ ಎಸಿಎಫ್ ಸಂಕೇತ್ ಅದಾವ್, ಎಸಿಎಫ್ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ., ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್‍ಬಾಬು, ಸುಳ್ಯ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ, ಅಗ್ನಿಶಾಮಕ ದಳದ ಎಸ್.ಐ ಕಿರಣ್ ಕುಮರ್, ಪಶು ವೈದ್ಯಾಧಿಕಾರಿ ಡಾ. ನಿತೀನ್ ಪ್ರಭು, ಆನೆ ಕಾರ್ಯಪಡೆಯ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿಗಳು, ಸಿಬ್ಬಂದಿಗಳು, ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದರು.
