ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಅವರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ – ಕರ್ನಾಟಕ ರಾಜ್ಯ ಎಕ್ಸಲೆನ್ಸ್ ಅವಾರ್ಡ್ 2026’
ಕನ್ನಡ ಭಾಷೆ, ನಾಡು, ನುಡಿ, ಕಲೆ, ಸಂಸ್ಕೃತಿ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಕನ್ನಡಿಗರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಬೆಂಗಳೂರಿನ ಪ್ರತಿಷ್ಠಿತ ಸ್ವರ್ಣ ಭಾರತ್ ಫೌಂಡೇಶನ್ (ರಿ.) ವತಿಯಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.

ಈ ವರ್ಷದ ಪ್ರಶಸ್ತಿಗೆ ಕೊಡಗಿನ ಬಹುಮುಖ ಪ್ರತಿಭೆಯ ಚಿತ್ರಶಿಲ್ಪ ಕಲಾವಿದ, ಲೇಖಕ ಹಾಗೂ ಸಾಂಸ್ಕೃತಿಕ ಸೇವಾ ಸಾಧಕ ಬಿ. ಕೆ. ಗಣೇಶ್ ರೈ ಅವರು ಆಯ್ಕೆಯಾಗಿದ್ದು, ಅವರಿಗೆ 2026ನೇ ಸಾಲಿನ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ – ಕರ್ನಾಟಕ ರಾಜ್ಯ ಎಕ್ಸಲೆನ್ಸ್ ಅವಾರ್ಡ್” ನೀಡಿ ಗೌರವಿಸಲಾಯಿತು.
2026ರ ನವೆಂಬರ್ 22ರಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದ ಭವ್ಯ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣೇಶ್ ರೈ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕದ ಪ್ರಸಿದ್ಧ ಗಾಯಕ, ರಂಗಭೂಮಿ ಹಾಗೂ ಕಿರುತೆರೆ ನಟ ಶ್ರೀ ಶಶಿಧರ್ ಕೋಟೆ, ಸ್ವರ್ಣ ಭಾರತ್ ಫೌಂಡೇಶನ್ನ ಮುಖ್ಯಸ್ಥರಾದ ಡಾ. ರಜನಿ ಸಂತೋಷ್ ಹಾಗೂ ಪರಿಮಳ ಜಗ್ಗೇಶ್ ಅವರು ಅತಿಥಿಗಳಾಗಿ ಉಪಸ್ಥಿತರಿದ್ದು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಸ್ತುತ ದುಬೈನಲ್ಲಿ ಅನಿವಾಸಿ ಕನ್ನಡಿಗರಾಗಿ ನೆಲೆಸಿರುವ ಬಿ. ಕೆ. ಗಣೇಶ್ ರೈ ಅವರು ಕಳೆದ ಐದು ದಶಕಗಳಿಂದ ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ಬರವಣಿಗೆ, ಮಾಧ್ಯಮ, ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಸಮಾಜ ಸೇವೆಯ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಬಹುಮುಖ ಕಲಾತ್ಮಕ ಸಾಧನೆ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ದುಬೈ ಕಲ್ಚರಲ್ ಮಿನಿಸ್ಟ್ರಿ ವತಿಯಿಂದ ಅವರಿಗೆ ಪ್ರತಿಷ್ಠಿತ ಕಲ್ಚರಲ್ ಗೋಲ್ಡನ್ ವೀಸಾ ನೀಡಿ ಗೌರವಿಸಿರುವುದು ಅವರ ಸಾಧನೆಗೆ ಮತ್ತೊಂದು ಮಹತ್ವದ ಹೆಗ್ಗಳಿಕೆಯಾಗಿದೆ.
ಜನ್ಮಭೂಮಿ ಭಾರತದಲ್ಲಿ ಹಾಗೂ ಕರ್ಮಭೂಮಿ ದುಬೈನಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ವಿದೇಶದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಕಲಾ ವೈಭವವನ್ನು ಪ್ರತಿಬಿಂಬಿಸುತ್ತಿರುವ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು, ಗೌರವ ಸನ್ಮಾನಗಳು ಹಾಗೂ ಮನ್ನಣೆಗಳನ್ನು ಪಡೆದಿರುವ ಬಿ. ಕೆ. ಗಣೇಶ್ ರೈ ಅವರ ಸಾಧನೆಯ ಕಿರೀಟಕ್ಕೆ ಇದೀಗ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ – ಕರ್ನಾಟಕ ರಾಜ್ಯ ಎಕ್ಸಲೆನ್ಸ್ ಅವಾರ್ಡ್ 2026’ ಮತ್ತೊಂದು ಅಮೂಲ್ಯ ಗರಿಯನ್ನು ಸೇರಿಸಿದೆ.
ಕಲೆ, ಸಾಹಿತ್ಯ, ಕನ್ನಡ ಭಾಷಾ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಬಿ. ಕೆ. ಗಣೇಶ್ ರೈ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.