ಕಾರ್ಕಳ | ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಪ್ರಚೋದನಕಾರಿ ಪೋಸ್ಟ್: ಸುದೀಪ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು
ಕಾರ್ಕಳ: ಈ ಬಾರಿಯ ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ನಿಟ್ಟೆಯ ಸುದೀಪ್ ಶೆಟ್ಟಿ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ದಿನಾಂಕ 03-01-2026 ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿರ್ಯಾದಿದಾರ ರುದ್ರೇಶ್ ಅವರು ಠಾಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ, ಸಂಜೆ ಸುಮಾರು 4:45 ಗಂಟೆಗೆ ಸುದೀಪ್ ಶೆಟ್ಟಿ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಎಂಬಾತನು “ಸುದೀಪ್ ಶೆಟ್ಟಿ ನಿಟ್ಟೆ” ಎಂಬ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿರುವುದು ಪತ್ತೆಯಾಗಿದೆ.
ಪೋಸ್ಟ್‌ನಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದ್ದು, ಪರ್ಯಾಯ ಮೆರವಣಿಗೆಯಲ್ಲಿ ದಫ್ ಕಾರ್ಯಕ್ರಮ ನಡೆಸುವ ಅಗತ್ಯವಿಲ್ಲ ಎಂದು ಹೇಳುವ ಜೊತೆಗೆ, ಲವ್ ಜಿಹಾದ್, ಗೋಹತ್ಯೆ, ಭಯೋತ್ಪಾದನೆ, ಹಿಂದೂ ಮೆರವಣಿಗೆಗಳ ಮೇಲೆ ದಾಳಿ, ಧಾರ್ಮಿಕ ಕೇಂದ್ರಗಳ ಮೇಲೆ ಹಲ್ಲೆ, ಸಮಾಜದ ನೆಮ್ಮದಿ ಹಾಳು ಮಾಡುವುದು ಮೊದಲಾದ ವಿಷಯಗಳನ್ನು ಉಲ್ಲೇಖಿಸಿ ನಿರ್ದಿಷ್ಟ ಸಮುದಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇಂತಹ ಹೇಳಿಕೆಗಳು ಜಾತಿ, ಧರ್ಮ ಮತ್ತು ಜನಾಂಗಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸಾಮರಸ್ಯಕ್ಕೆ ತೊಂದರೆ ಉಂಟುಮಾಡುವ ಸ್ವರೂಪದಲ್ಲಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2026ರಂತೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 196(1), 353(2), 352 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
C
