ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ₹3 ಲಕ್ಷ ದಂಡ
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪ್ಯದಲ್ಲಿ 2019ರ ಸೆಪ್ಟೆಂಬರ್ 3ರಂದು ನಡೆದಿದ್ದ ಕಾರ್ತಿಕ್ ಮೆರ್ಲ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಮಾನ್ಯ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ₹3 ಲಕ್ಷ ದಂಡ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2019ರಂತೆ ಐಪಿಸಿ ಕಲಂ 504, 341, 302 ಹಾಗೂ 212ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ತನಿಖಾಧಿಕಾರಿ ಹಾಗೂ ಪೊಲೀಸ್ ನಿರೀಕ್ಷಕರಾಗಿದ್ದ ನಾಗೇಶ್ ಕದ್ರಿ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಪ್ರೀತು ಅಲಿಯಾಸ್ ಪ್ರೀತೇಶ್ ಸುಳ್ಯ, ಚರಣ್, ಕಿರಣ್ ಅಲಿಯಾಸ್ ಮಣಿ ಹಾಗೂ ಸಂತು ಅಲಿಯಾಸ್ ಸ್ಟಿವನ್ ಮಾಂತೇರೋ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಯ್ಕ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರೀತು ಅಲಿಯಾಸ್ ಪ್ರೀತೇಶ್ ಸುಳ್ಯ ಹಾಗೂ ಕಿರಣ್ ಅಲಿಯಾಸ್ ಮಣಿ ಅವರಿಗೆ ಐಪಿಸಿ ಕಲಂ 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿದ್ದಾರೆ.
ಅದೇ ರೀತಿ, ಐಪಿಸಿ ಕಲಂ 341ರ ಅಡಿಯಲ್ಲಿ 3 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹500 ದಂಡ ವಿಧಿಸಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಸಂತು ಅಲಿಯಾಸ್ ಸ್ಟಿವನ್ ಮಾಂತೇರೋ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಮತ್ತೊಬ್ಬ ಆರೋಪಿ ಚರಣ್ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಜಯಂತಿ ಕೆ. ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.
